ವಿವಿಧ ರಾಜ್ಯಗಳ ಪೊಲೀಸರಿಂದ ರುದ್ರೇಶ್ ಹಂತಕರ ತೀವ್ರ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Rudresh-0001

ಬೆಂಗಳೂರು,ನ.7-ದಿನಕ್ಕೊಂದು ಸ್ಫೋಟಕ ಸುದ್ದಿ ಹೊರ ಹಾಕುತ್ತಿರುವ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ವಿವಿಧ ರಾಜ್ಯಗಳ ಪೊಲೀಸರೂ ತೀವ್ರ ತನಿಖೆಗೊಳಪಡಿಸಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿರುವ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಅಪಾರ ವಿಭಾಗಗಳ ಪೊಲೀಸರು ಆರೋಪಿಗಳನ್ನು ತನಿಖೆಗೊಳಪಡಿಸಿ ಮಾಹಿತಿ ಪಡೆದಿದ್ದಾರೆ.  ಬೆಂಗಳೂರಿನ ರಹಸ್ಯ ಸ್ಥಳವೊಂದರಲ್ಲಿ ರುದ್ರೇಶ್ ಕೊಲೆ ಪ್ರಕರಣದ ರೂವಾರಿಗಳಾಗಿರುವ ಮೊಹಮ್ಮದ್ ಮಜೀದುಲ್ಲಾ , ಮೊಹಮ್ಮದ್ ಸಾಧಿಕ್, ವಾಸಿಂ ಅಹಮ್ಮದ್ ಮತ್ತು ಇರ್ಫಾನ್ ಪಾಷ ಅವರುಗಳನ್ನು ನಾಲ್ಕು ರಾಜ್ಯಗಳ ಪೊಲೀಸರು ತನಿಖೆಗೊಳಪಡಿಸಿರುವುದಾಗಿ ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಕಳೆದ ಅ.16ರಂದು ಶಿವಾಜಿನಗರದ ಕಾಮರಾಜ್ರಸ್ತೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ನನ್ನು ಪಲ್ಸರ್ ಬೈಕ್ನಲ್ಲಿ ಬಂದಿದ್ದ ಇಬ್ಬರು ಮುಸುಕುಧಾರಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು.

ರುದ್ರೇಶ್ ಕೊಲೆ ಪ್ರಕರಣಕ್ಕೂ ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆದಿರುವ ಹತ್ಯೆಗೂ ಸ್ವಾಮ್ಯತೆ ಇರುವುದರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲು ನಾಲ್ವರನ್ನು ಕಳೆದ ಎರಡು ದಿನಗಳಿಂದ ವಿಚಾರಣೆಗೆ ಒಳಪಡಿಸಲಾಗಿದೆ.  ತಮಿಳುನಾಡಿನ ಕೊಯಮತ್ತೂರಿನಲ್ಲಿ ಹಿಂದು ಮುನ್ನಾನಿ ಸಂಘಟನೆಯ ಕಾರ್ಯಕರ್ತ ಶಶಿಕುಮಾರ್ ಎಂಬಾತನನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಇದೇ ರೀತಿ ಹಾಡಹಗಲೇ ಭೀಕರವಾಗಿ ಕೊಲೆ ಮಾಡಲಾಗಿತ್ತು.  ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂಲಭೂತವಾದಿ ಸಂಘಟನೆಯೊಂದರ ಕಾರ್ಯಕರ್ತರು ರುದ್ರೇಶ್ ಕೊಲೆ ಮಾಡಿದ ಮಾದರಿಯಲ್ಲೇ ಹತ್ಯೆ ಮಾಡಿದ್ದರು. ಇನ್ನು ಆಂಧ್ರಪ್ರದೇಶ, ತೆಲಂಗಾಣದಲ್ಲೂ ಕೆಲವು ಹಿಂದು ಮುಖಂಡರನ್ನು ಹತ್ಯೆ ಮಾಡಲಾಗಿತ್ತು. ಹೀಗಾಗಿ ರುದ್ರೇಶ್ ಪ್ರಕರಣಕ್ಕೂ ಹಿಂದೆ ನಡೆದಿರುವ ಪ್ರಕರಣಗಳಿಗೂ ಹೋಲಿಕೆ ಇದೆಯೇ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಮೂಲಗಳ ಪ್ರಕಾರ ಈಗಾಗಲೇ ಪೊಲೀಸರ ವಶದಲ್ಲಿರುವ ರುದ್ರೇಶ್ ಹಂತಕರು ತಾವು ಪಾಪುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವು. ಇಸ್ಲಾಂ ಧರ್ಮವನ್ನು ವಿರೋಧಿಸುತ್ತಿದ್ದವರನ್ನು ಹತ್ಯೆ ಮಾಡುವುದು ತಮ್ಮ ಗುರಿಯಾಗಿತ್ತೆಂಬ ಮಾಹಿತಿಯನ್ನು ಹೊರ ಹಾಕಿದ್ದಾರೆ.  ಬೆಂಗಳೂರಿಗೆ ಬಂದ ನಾಲ್ಕು ರಾಜ್ಯಗಳ ಪೊಲೀಸರಿಗೆ ಇಲ್ಲಿನ ಅಪರಾಧ ವಿಭಾಗದ ಪೊಲೀಸರ ವಿಚಾರಣೆಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ ಎಂದು ತಿಳಿದುಬಂದಿದೆ.  ಸಾಧ್ಯವಾದರೆ ಈ ಆರೋಪಿಗಳನ್ನು ಇನ್ನು ಹೆಚ್ಚಿನ ವಿಚಾರಣೆಗೆ ಹೊರರಾಜ್ಯದವರೆಗೂ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin