ವಿವಿ ಪ್ಯಾಟ್ ಯಂತ್ರಗಳನ್ನು ಕಂಡು ಮತದಾರರು ಫುಲ್ ಖುಷ್..!

ಈ ಸುದ್ದಿಯನ್ನು ಶೇರ್ ಮಾಡಿ

vvpat

ಬೆಂಗಳೂರು, ಮೇ 12- ವಿವಿ ಪ್ಯಾಟ್ ಯಂತ್ರಗಳನ್ನು ಕಂಡು ಮತದಾರರು ಫುಲ್ ಖುಷ್..! ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುದನ್ನು ಖಾತರಿಪಡಿಸಿಕೊಂಡ ಮತದಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. ಇಂದು ಮತಗಟ್ಟೆಗೆ ಬಂದು ವಿದ್ಯುನ್ಮಾನ ಮತಯಂತ್ರಗಳ ಬಟನ್ ಒತ್ತಿದ ಕೂಡಲೇ ತಾವು ಯಾರಿಗೆ ಮತ ಒತ್ತಿದ್ದೇವೆ ಎಂಬ ಗುರುತು ಪಕ್ಕದ ವಿವಿ ಪ್ಯಾಟ್‍ನಲ್ಲಿ 7 ಸೆಕೆಂಡ್‍ಗಳ ಕಾಲ ಬಂತು.

ಯಾರಿಗೆ ಬಂತು, ಅದನ್ನು ಕಂಡ ಕೂಡಲೇ ಮೊಗದಲ್ಲಿ ಸಂತಸದ ವಾತಾವರಣ ಮೂಡಿತ್ತು. ಮೊದಲ ಬಾರಿ ಇಂತಹ ಯಂತ್ರಗಳನ್ನು ಕಂಡು ಮತದಾರರು ಬಹಳ ಖುಷಿಯಾಗಿದ್ದರು. ಕಾಲಕ್ರಮೇಣ ಸುಧಾರಣೆಯಾಗುತ್ತಿರುವ ಚುನಾವಣಾ ಪದ್ಧತಿಗಳ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಮತಗಟ್ಟೆಗಳ ಮುಂದೆ ಚುನಾವಣಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡುತ್ತಿದ್ದರು.

ತುಂಬ ಚೆನ್ನಾಗಿದೆ. ನಾವು ಯಾರಿಗೆ ಮತ ಹಾಕಿದ್ದೇವೆ ಎಂಬುದು ನಮ್ಮ ಕಣ್ಣ ಮುಂದೆ ಬಂತು. ನಮಗಂತೂ ಬಹಳ ಖುಷಿಯಾಯ್ತು. ಇದುವರೆಗೆ ಯಾರಿಗೆ ಹಾಕಿದೆವೋ, ಏನಾಯ್ತೋ ಆತಂಕವಿತ್ತು. ಫಲಿತಾಂಶ ಬಂದಾಗ ಗೊಂದಲ ಉಂಟಾಗುತ್ತಿತ್ತು. ಈಗ ಆ ಗೊಂದಲ ನಮಗಿಲ್ಲ. ನಾವು ಯಾರಿಗೆ ವೋಟ್ ಹಾಕಿದ್ದೇವೆ, ನಮ್ಮ ಹಕ್ಕನ್ನು ಯಾರಿಗೆ ಚಲಾಯಿಸಿದ್ದೇವೆ ಎಂಬ ಆತ್ಮತೃಪ್ತಿ ನಮಗಿದೆ. ಅದನ್ನು ಚುನಾವಣಾ ಆಯೋಗ ಈ ರೀತಿ ಒದಗಿಸಿಕೊಟ್ಟಿರುವುದಕ್ಕೆ ನಮಗೆ ಖುಷಿಯಾಗುತ್ತಿದೆ.

ದಿನೇ ದಿನೇ ಕ್ರಮಗಳು ಸುಧಾರಣೆಯಾಗುತ್ತಿವೆ. ಇನ್ನು ಮುಂದೆ ಒಳ್ಳೊಳ್ಳೆ ಕ್ರಮಗಳು ಬರುತ್ತವೆ ಎಂಬುದಕ್ಕೆ ಇದೇ ಸಾಕ್ಷಿ. ಯಾವುದೇ ರೀತಿಯ ಅಕ್ರಮಗಳು ನಡೆಯಲು ಸಾಧ್ಯವಾಗುವುದಿಲ್ಲ. ನಾವು ಹಾಕಿರುವ ಮತ ನಮ್ಮ ಕಣ್ಣೆದುರಿಗೇ ಬರುತ್ತದೆ. ಯಾವ ಹ್ಯಾಕಿಂಗ್, ಟ್ಯಾಂಪರಿಂಗ್ ಆಗಲು ಸಾಧ್ಯವಿಲ್ಲವೆಂದೆನಿಸುತ್ತದೆ ಎಂದು ಮಾತನಾಡಿಕೊಳ್ಳುತ್ತಿರುವುದು ಮತಗಟ್ಟೆಗಳ ಬಳಿ ಕೇಳಿಬಂತು. ಮಹಿಳೆಯರು, ಹಿರಿಯ ನಾಗರಿಕರು ಸಾಕಷ್ಟು ಜನ ವಿವಿ ಪ್ಯಾಟ್‍ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದು ಕೇಳಿಬಂತು. ಬೊಂಬಾಟಾಗಿದೆ. ನಾವು ಯಾರಿಗೆ ವೋಟ್ ಹಾಕಿದ್ದೇವೆ ಎಂಬುದು ನಮಗೇ ಗೊತ್ತಾಗುತ್ತಿದೆ. ಹೋಗಿ ಹೋಗಿ ವೋಟ್ ಹಾಕಿ, ಹೊರಗೆ ಏನೂ ಕೇಳ್ಬೇಡಿ. ನೀವ್ಯಾರಿಗೆ ಹಾಕಿದ್ದೀರಿ ಎಂಬುದು ನಿಮಗೇ ಗೊತ್ತಾಗುತ್ತೆ ಅಂತ ಮಾತನಾಡಿಕೊಳ್ಳುತ್ತಿದ್ದರು.

Facebook Comments

Sri Raghav

Admin