ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಗೆ ಅಜರ್ ಸೇರ್ಪಡೆಗೆ ಚೀನಾ ಅಡ್ಡಿ : ಭಾರತ ತೀವ್ರ ಆಕ್ಷೇಪ
ನವದೆಹಲಿ, ಡಿ.31-ಪಾಕಿಸ್ತಾನದಲ್ಲಿರುವ ಜೈಷ್-ಎ-ಮಹಮದ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಪ್ರಯತ್ನಗಳಿಗೆ ಅಡ್ಡಗಾಲು ಹಾಕುತ್ತಿರುವ ಚೀನಾದ ದ್ವಿಮುಖ ನೀತಿ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸ್ವತ: ಚೀನಾ ದೇಶವೇ ಭಯೋತ್ಪಾದನೆ ಪಿಡುಗಿಗೆ ಬಲಿಯಾಗಿದೆ. ಹೀಗಿರುವಾಗ ಅಜರ್ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ನಮ್ಮ ಯತ್ನಗಳಿಗೆ ಚೀನಾ ತೊಡರುಗಾಲು ಹಾಕುತ್ತಿರುವುದು ಅಶ್ಚರ್ಯಕರವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಗಂಭೀರ ವಿಷಯದ ಪ್ರಾಮುಖ್ಯತೆಯನ್ನು ಚೀನಾ ಅರ್ಥ ಮಾಡಿಕೊಳ್ಳುತ್ತದೆ ಎಂಬುದು ಭಾರತದ ನಿರೀಕ್ಷೆಯಾಗಿತ್ತು. ಆದರೆ ಚೀನಾದ ಈ ನಿರ್ಧಾರದಿಂದ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಬ್ಬಗೆ ನೀತಿ ಇರುವುದು ಸಾಬೀತಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು. ಭಯೋತ್ಪಾದನೆ ಮತ್ತು ಹಿಂಸಾಕೃತ್ಯಗಳಲ್ಲಿ ತೊಡಗಿರುವವರನ್ನು ಕಾನೂನು ಕಟಕಟೆಗೆ ತರುವ ತನ್ನ ಪ್ರಯತ್ನವನ್ನು ಭಾರತ ಮುಂದುವರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.