ವಿಶ್ವ ಲಿಂಗಾಯಿತ ಮಹಾಸಭಾ ಅಸ್ತಿತ್ವಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Lingayata--01

ಬೆಂಗಳೂರು,ಆ.10- ಪ್ರತ್ಯೇಕ ಧರ್ಮ ರಚನೆ ಮಾಡುವ ಸಂಬಂಧ ವೀರಶೈವ-ಲಿಂಗಾಯಿತ ಒಂದೇ ಎಂಬ ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ಣಯಕ್ಕೆ ವಿರುದ್ಧವಾಗಿ ಅಖಿಲ ಭಾರತ ವಿಶ್ವ ಲಿಂಗಾಯಿತ ಧರ್ಮ ಮಹಾಸಭಾ ಅಸ್ತಿತ್ವಕ್ಕೆ ಬಂದಿದೆ. ಈ ಮೂಲಕ ಧರ್ಮ ಸ್ಥಾಪನೆ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಇಬ್ಬಾಗವಾಗಿದ್ದು , ಸಮುದಾಯದಲ್ಲೇ ಭಿನ್ನಾಭಿಪ್ರಾಯ ಉಂಟಾಗಿರುವುದು ಸ್ಪಷ್ಟವಾಗಿದೆ.

ಲಿಂಗಾಯಿತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ನೀಡುವ ಸಂಬಂಧ ಇಂದು ನಗರದ ಜ್ಞಾನಜ್ಯೊತಿ ಆಡಿಟೋರಿಯಂನಲ್ಲಿ ಸಮಾಲೋಚನೆ ಸಭೆ ನಡೆಯಿತು.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಸಚಿವರಾದ ಶರಣ್ ಪ್ರಕಾಶ್ ಪಾಟೀಲ್, ವಿನಯ್ ಕುಲಕರ್ಣಿ, ಸಂಸದ ಪ್ರಕಾಶ್ ಹುಕ್ಕೇರಿ, ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ , ಶಾಸಕ ಬಿ.ಆರ್.ಪಾಟೀಲ್, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ , ಲಿಂಗಾಯಿತ ಯುವ ವೇದಿಕೆಯ ವಿರೂಪಾಕ್ಷಪ್ಪ , ಚಿಂತಕ ರಂಜಾನ್ ದರ್ಗಾ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಬೆಳಗಾವಿಯ ನಾಗನೂರು ಮಠದ ಡಾ.ಸಿದ್ದರಾಜ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ, ಬಾಲ್ಕಿ ಹಿರೇ ಮಠದ ಡಾ.ಬಸವಲಿಂಗ ಪಟ್ಟದೇವರು, ಮುರುಘಾ ಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಜಯಬಸವ ಮೃತ್ಯುಂಜಯ ಸ್ವಾಮೀಜಿ, ಚಿತ್ತರಗಿ ಮಠದ ಮಹಾಂತಪ್ಪ ಸ್ವಾಮೀಜಿ, ಚಿತ್ರದುರ್ಗ ಬೃಹ್ಮನಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಮಹಾಸ್ವಾಮೀಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸಭೆಯಲ್ಲಿ ಪ್ರಮುಖವಾಗಿ ವೀರಶೈವ-ಲಿಂಗಾಯಿತ ಸಮುದಾಯಗಳು ಒಂದೇ ಎಂಬ ಮಹಾಸಭಾ ತೆಗೆದುಕೊಂಡ ನಿರ್ಣಯಕ್ಕೆ ಹಲವರು ವಿರೋಧ ವ್ಯಕ್ತವಾಗಿದೆ. ಬಸವಣ್ಣ ಹಾಗೂ ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯಿತ ಧರ್ಮಕ್ಕೂ, ವೀರಶೈವ ಸಮುದಾಯಕ್ಕೂ ಆಚರಣೆ, ಸಿದ್ದಾಂತಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಈ ಎರಡೂ ಸಮುದಾಯಗಳು ಒಂದೇ ಎನ್ನಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವೀರಶೈವರು ಇನ್ನು ಮುಂದೆ ಲಿಂಗಾಯಿತ ಧರ್ಮದ ಸಿದ್ದಾಂತ ವಚನಗಳನ್ನು ಬಳಕೆ ಮಾಡಿಕೊಳ್ಳಬಾರದು. ಬಸವ ತತ್ವ ಪ್ರಚಾರ, ವಿರಕ್ತ ಮಠಗಳಲ್ಲಿನ ಮಠಾಧ್ಯಕ್ಷರು ಇದನ್ನು ಒಪ್ಪಿ ಲಿಂಗಾಯಿತ ಸಮುದಾಯದ ತತ್ವ ಸಿದ್ದಾಂತಗಳನ್ನು ಪ್ರಸಾರ ಮಾಡಲು ಮಠಾಧೀಶರು ಸಲಹೆ ಮಾಡಿದ್ದಾರೆ.

ಪೀಠ ತ್ಯಾಗ ಮಾಡಿ:

ಲಿಂಗಾಯಿತ ಧರ್ಮ ಸ್ಥಾಪನೆ ಮಾಡಲು ವಿರೋಧ ವ್ಯಕ್ತಪಡಿಸುವವ ಮಠಾಧೀಶರು ತಕ್ಷಣವೇ ಪೀಠ ತ್ಯಾಗ ಮಾಡಬೇಕೆಂದು ಕೆಲ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.  ಲಿಂಗಾಯಿತ-ವೀರಶೈವ ಎಂದಿಗೂ ಒಂದೇ ಆಗಲೂ ಸಾಧ್ಯವಿಲ್ಲ. ಕೆಲವರು ಮಹಾಸಭಾದ ಮೂಲಕ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಸವಣ್ಣನವರ ವಚನಗಳನ್ನು ತಮಗೆ ಬೇಕಾದಂತೆ ತಿರುಚಿ ಮಹಾಮಾನವತಾ ವಾದಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಕೆಲವರು ಕಿಡಿಕಾರಿದರು.

ಅಲ್ಪಸಂಖ್ಯಾತ ಧರ್ಮಕ್ಕೆ ಒತ್ತಾಯ:

ರಾಜ್ಯ ಸರ್ಕಾರ ಲಿಂಗಾಯಿತ ಧರ್ಮವನ್ನು ಸ್ಥಾಪನೆ ಮಾಡಿ ಅಲ್ಪಸಂಖ್ಯಾತ ಧರ್ಮ ಎಂದು ಪರಿಗಣಿಸಬೇಕು. ಇದರಿಂದ ರಾಜ್ಯ ಹಾಗೂ ಕೇಂದ್ರದಿಂದ ಸಮುದಾಯಕ್ಕೆ ವಿಶೇಷ ಸವಲತ್ತುಗಳು ಸಿಗುತ್ತವೆ. ಶಿಕ್ಷಣ ಸಂಸ್ಥೆಗೂ ಅನುಕೂಲವಾಗುತ್ತದೆ ಎಂದು ಸಮಾಜದ ಮುಖ್ಯಸ್ಥರು ಸಚಿವರಿಗೆ ಸಲಹೆ ಮಾಡಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿಯನ್ನು ಭೇಟಿ ಮಾಡಲು ಸಚಿವರಾದ ಎಂ.ಬಿ.ಪಾಟೀಲ್, ಶರಣಪ್ರಕಾಶ್ ಪಾಟೀಲ್, ವಿನಯ್ ಕುಲಕರ್ಣಿ ಸೇರಿದಂತೆ ಕೆಲವರು ಮುಂದಾಳತ್ವ ವಹಿಸಬೇಕು. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಶ್ರೀಗಳು ನಿರ್ದೇಶನ ನೀಡಿದ್ದಾರೆ. ಲಿಂಗಾಯಿತ  ಧರ್ಮ ಸ್ಥಾಪನೆ ಮಾಡಲು ಅಖಿಲ ಭಾರತ ವೀರಶೈವ ಮಹಾಸಭಾ ತೆಗೆದುಕೊಳ್ಳುವ ಯಾವುದೇ ನಿರ್ಣಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನು ಮುಂದೆ ಅಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಭಾಗವಹಿಸಬಾರದೆಂದು ಸೂಚಿಸಲಾಗಿದೆ.

ವೀರಶೈವ ಲಿಂಗಾಯಿತ ಧರ್ಮ ಘೋಷಣೆ ಬಗ್ಗೆ ಉತ್ತರಿಸಲು ಸಿದ್ಧರಾಗಿ : 

ಬೆಂಗಳೂರು,ಆ.10- ವೀರಶೈವ ಲಿಂಗಾಯಿತ ಧರ್ಮ ಘೋಷಣೆ ವಿಚಾರದಲ್ಲಿ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಿದ್ಧರಾಗಿ ಎಂದು ವೀರಶೈವ ಸಮಾಜದ ಮುಖಂಡ ಶಿವಾನಂದ ಜಾಮ್‍ದಾರ್ ಕರೆ ನೀಡಿದರು. ಲಿಂಗಾಯಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ದಾಖಲೆಗಳಲ್ಲಿ ಲಿಂಗಾಯಿತ ಸಮುದಾಯದ ಬಗ್ಗೆ ಏನೆಲ್ಲಾ ಇದೆ ಎಂಬುದನ್ನು ಮಠಾಧೀಶರಿಗೆ ವಿವರಣೆ ನೀಡಿ ಮಾತನಾಡಿದರು.  ವಚನ ಸಾಹಿತ್ಯದ ಬಗ್ಗೆ ತಿಳಿಸಿ ಧರ್ಮದ ಬಗ್ಗೆ ಹಾದಿಬೀದಿಯಲ್ಲಿ ರಂಪಾಟ ಮಾಡುವುದರಲ್ಲಿ ಅರ್ಥವಿಲ್ಲ. ವೀರಶೈವ ಲಿಂಗಾಯಿತ ಧರ್ಮ ಘೋಷಣೆ ವಿಚಾರದಲ್ಲಿ ಸಮಾಜದಲ್ಲಿ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಿದ್ಧರಾಗಬೇಕೆಂದು ಹಾಗೂ ಇದಕ್ಕೆ ಸಂಘಟಿತ ಹೋರಾಟ ಅತ್ಯಗತ್ಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಈ ವೇಳೆ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿಯವರನ್ನು ಜಮಾದಾರ್ ನೆನಪು ಮಾಡಿಕೊಂಡರು. ಸ್ವತಂತ್ರ ಧರ್ಮ ಘೋಷಣೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರ ಈ ಧರ್ಮ ಘೋಷಣೆ ಮಾಡಬೇಕು. ಸುಪ್ರೀಂಕೋರ್ಟ್ ತಜ್ಞ ಸಮಿತಿಯಿಂದ ಪರಿಶೀಲನೆ ನಡೆಯಬೇಕು. ಇದುವರೆಗೆ ನಡೆದ ಜಾತಿ ಜನಗಣತಿಯಲ್ಲಿ ಹಿಂದೂ ಲಿಂಗಾಯಿತ ಎಂದು ನಮೂದಾಗಿದೆಯೇ ಹೊರತು ವೀರಶೈವ ಎಂಬುದಿಲ್ಲ. ಆದರೆ ವೀರಶೈವ ಎಂಬ ಪದ ಎಲ್ಲಿಂದ ಬಂತು ಎಂಬುದು ತೀವ್ರ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಸಭೆಯಲ್ಲಿ ಜಾಮ್‍ದಾರ್ ಹೇಳಿದ್ದಾರೆ.

ಸಿಎಂ ಭೇಟಿ ಮಾಡಲು ನಿರ್ಧಾರ:

ಸಭೆಯ ನಂತರ ಸಚಿವರಾದ ಎಂ.ಬಿ.ಪಾಟೀಲ್, ವಿನಯ್‍ಕುಲಕರ್ಣಿ, ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಠಾಧೀಶರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದು , ಲಿಂಗಾಯಿತ ಸ್ವತಂತ್ರ ಧರ್ಮ ಘೋಷಣೆ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಮನವಿ ಮಾಡಲಿದೆ.

Facebook Comments

Sri Raghav

Admin