ವೇತನ ಪರಿಷ್ಕರಿಸುವಂತೆ ಒತ್ತಾಯಿಸಿ ಪೌರ ಕಾರ್ಮಿಕರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu

ನಂಜನಗೂಡು, ಅ.18- ತಾಲೂಕಿನ ದೇಬೂರು ಗ್ರಾಮ ಪಂಚಾಯ್ತಿ ಮುಂಭಾಗ ಸರ್ಕಾರದ ಆದೇಶದನ್ವಯ ವೇತನವನ್ನು ಪರಿಷ್ಕರಿಸುವಂತೆ ಒತ್ತಾಯಿಸಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.ಮಾಜಿ ಪುರಸಭಾ ಅಧ್ಯಕ್ಷ ಚೆಲುವರಾಜು ಹಾಗೂ ಪೌರಕಾರ್ಮಿಕರ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಆಂಡವ ನೇತೃತ್ವದಲ್ಲಿ ಸರ್ಕಾರ ಘೋಷಿಸಿರುವ ವೇತನವನ್ನು ಪರಿಷ್ಕರಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.ಪೌರ ಕಾರ್ಮಿಕರ ಮುಖಂಡ ಹಾಗೂ ಮಾಜಿ ಪುರಸಭಾ ಅಧ್ಯಕ್ಷ ಚೆಲುವರಾಜು ಮಾತನಾಡಿ, ಈ ಹಿಂದೆ ಸರ್ಕಾರ ಪೌರ ಕಾರ್ಮಿಕರ ವೇತನ 7 ಸಾವಿರ ನೀಡಬೇಕೆಂದು ಆದೇಶವಿದ್ದರೂ ಸಹ ಇಲ್ಲಿನ ಗ್ರಾಮ ಪಂಚಾಯ್ತಿ 4 ಸಾವಿರ ವೇತನವನ್ನೇ ನೀಡುತ್ತಿದ್ದು ನಂತರ 2016ರಲ್ಲಿ ಸರ್ಕಾರ ಪೌರ ಕಾರ್ಮಿಕರ ವೇತನವನ್ನು 12,800 ರೂ.ಗಳಿಗೆ ಹೆಚ್ಚಿಸಿ ಆದೇಶ ನೀಡಿದ್ದರೂ ಸಹ ಬರೀ 4 ಸಾವಿರ ವೇತನವನ್ನೇ ನೀಡುತ್ತಿರುವುದು ಇಲ್ಲಿನ ಅವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ಸರ್ಕಾರದ ಆದೇಶದಂತೆ ನಿಗದಿಗೊಳಿಸಿರುವ ವೇತನವನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರಲ್ಲದೆ ವೇತನ ಪರಿಷ್ಕರಿಸುವುದು ವಿಳಂಬವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಈ ಸಂಬಂಧ ಗ್ರಾಮಾಭಿವೃದ್ಧಿ ಅಧಿಕಾರಿ ಎಂ.ಬಿ.ಗೀತಾ ರವರಿಗೆ ಮನವಿಯನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರ ಮನವಿಯನ್ನು ಇದೇ ತಿಂಗಳ 21 ರಂದು ತಾಲೂಕು ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಮಂಡಿಸಿ ವೇತನ ಪರಿಷ್ಕರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಆಂಡವ, ನರಸಿಂಹ, ಹೇಮಂತ್, ಕೃಷ್ಣ, ಶೇಖರ್, ನಾಗಪ್ಪ, ಮಾದೇವ, ಮಣಿ, ಮೀನಾ, ರಂಗಮ್ಮ, ಜ್ಯೋತಿ, ಮುರುಗ, ಸುಬ್ಬ ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin