ವೈಜ್ಞಾನಿಕ ಹಾಗೂ ವೈಚಾರಿಕ ತಳಹದಿಯ ಮೇಲೆ ರಚಿತವಾಗಲಿ ಕವಿತೆ

ಈ ಸುದ್ದಿಯನ್ನು ಶೇರ್ ಮಾಡಿ

hasana-3

ಆಲೂರು(ಹಾಸನ), ಆ.15- ಕಾವ್ಯ ಪ್ರಸ್ತುತ ಸಂದರ್ಭದಲ್ಲಿ ವೈಚಾರಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ರಚಿತವಾಗಿ ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳನ್ನೊಳಗೊಂಡಂತೆ ಜತ್ಯಾತೀತವಾದ ಸಮ ಸಮಾಜದ ಕನಸುಗಳನ್ನು ಬಿತ್ತುವಂತಿರಬೇಕು ಎಂದು ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ಆಲೂರು ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪರಮೇಶ್ ಮಡಬಲು ಅವರ ಸಾಧಕರ ಹಾದಿಯಲ್ಲಿ ಹಾಗೂ ಜ್ಞಾನ ವಿಜ್ಞಾನ ಸಂಗಮ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಕೊಳೆಯನ್ನು ಕಿತ್ತೊಗೆಯುವಲ್ಲಿ, ಮೌಢ್ಯ ಸಂಪ್ರದಾಯವನ್ನು ಬಡಿದೋಡಿಸುವ ನಿಟ್ಟಿನಲ್ಲಿ ಬೆಳಕು ಚೆಲ್ಲಬೇಕು ಅಂದಾಗ ಮಾತ್ರ ಕಾವ್ಯದ ಸೃಷ್ಠಿ ಸಾರ್ಥಕತೆ ಪಡೆಯುತ್ತದೆ ಎಂದು ಪ್ರತಿಪಾದಿಸಿದರು.

ಒಂದರಿಂದ ಐದನೇ ತರಗತಿವರೆಗೆ ಕಡ್ಡಾಯ ಕನ್ನಡ ಮಾಧ್ಯಮ ಹಾಗೂ ಸಮಾನ ಪಠ್ಯಕ್ರಮ ಜಾರಿಗೆ ತಂದರೆ ತಮ್ಮಷ್ಟಕ್ಕೇ ತಾವೇ ಸರಕಾರಿ ಶಾಲೆಗಳು ಸುಧಾರಿಸುತ್ತವೆ. ಜೊತೆಗೆ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿಯೂ ಪ್ರತಿಯೊಬ್ಬ ಶಿಕ್ಷಕನೂ ಜವಬ್ದಾರಿಯನ್ನರಿತು ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಕರೆ ನೀಡಿದರು.
ನಮ್ಮನ್ನು ನಾವುಗಳು ಕರ್ತವ್ಯ ದೃಷ್ಠಕೋನ ದಿಂದ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಆದ್ದರಿಂದಲೇ ಕವಿಗಳಿಗೆ ಸಮಾಜದ ಎಲ್ಲ ಸ್ತರದ ವಿಷಯ ವಸ್ತುಗಳು ಕಾವ್ಯದ ಕನ್ನಿಕೆಯಾಗಬೇಕಿದೆ. ಸಾಹಿತ್ಯ ಸೃಷ್ಠಿ ಕೇವಲ ವಿದ್ಯಾವಂತರಿಂದಲೇ ಮಾತ್ರ ಎಂದು ಹೇಳಲಾಗದು. ಕಾರಣ ಯಾವುದೇ ಪದವಿ, ಪಿಹೆಚ್‍ಡಿಗಳನ್ನು ಪಡೆಯದೇ ಶಾಲೆಯ ಮೆಟ್ಟಿಲನ್ನೇ ತುಳಿಯದ ಜಾನಪದ ಗರತಿಯಿಂದ ರಿಂಗಣಿಸಿದ ಅನುಭಾವ ಮೌಖಿಕ ಸಾಹಿತ್ಯ ಉತ್ಕಷ್ಟತೆಯನ್ನು ಸಾರುತ್ತದೆ ಎಂದು ಹೇಳಿದರು.
ಸಾಹಿತಿ ಕೆ.ಬಿ.ಗುರುಮೂರ್ತಿ ತೊಡೆಯಬೇಕಾಗಿದೆ ಕಸವ ಎಂಬ ಕವಿತೆಯನ್ನು ವಾಚಿಸುವ ಮೂಲಕ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಮೌಢ್ಯ ಉನ್ನತಿಯ ಕಾಲಘಟ್ಟದಲ್ಲಿ ವಿಜ್ಞಾನದ ಅವಶ್ಯಕವಿದೆ. ವ್ಯಕ್ತಿಯ ಚಿಂತನೆಗಳು ಮತ್ತು ರೂಪದ ಫಲಗಳು ಅವರ ಕೃತಿಯಲ್ಲಿ ಒಡಮೂಡುತ್ತವೆ. ಸಾಹಿತ್ಯ ಆಯಾ ನೆಲದ ಸಾಂಸ್ಕೃತಿಯ  ಪ್ರತಿಬಿಂಬವಾಗಿದೆ ಎಂದು ತಿಳಿಸಿದರು.ಹಿರಿಯ ಕವಯಿತ್ರಿ ಎ.ಎಸ್.ಭಾಗೀರಥಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಪಾ.ಹೈ.ಗುಲಾಂ ಸತ್ತಾರ್, ತಾಲ್ಲೂಕು ಕ.ಸಾ.ಪ ಅಧ್ಯಕ್ಷರಾದ ಎಸ್.ಎಸ್.ಶಿವಮೂರ್ತಿ, ಗೌರವ ಕಾರ್ಯದರ್ಶಿ ಗೋಪಾಲಕೃಷ್ಣ, ಖಜಾಂಚಿ ಆರ್.ಟಿ.ಗುರುಸ್ವಾಮಿ, ಲೇಖಕ ಎಂ.ಜಿ.ಪರಮೇಶ್,ಲಲಿತಮ್ಮ, ಗಿರಿಜಮ್ಮ ಮುಂತಾದವರು ಹಾಜರಿದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin