ವೈದ್ಯಕೀಯ ಕಾಲೇಜು ಸ್ಥಾಪನೆ ವಿಳಂಬ : ವಿಧಾನಸಭೆಯಲ್ಲಿ ಪಕ್ಷ ಭೇದ ಮರೆತು ಸರ್ಕಾರಕ್ಕೆ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Session---01

ಬೆಂಗಳೂರು, ಫೆ.8- ವೈದ್ಯಕೀಯ ಕಾಲೇಜು ಸ್ಥಾಪನೆಯಲ್ಲಿನ ವಿಳಂಬನೆ ವಿರೋಧಿಸಿ ಪಕ್ಷ ಭೇದ ಮರೆತು ಶಾಸಕರು ವಿಧಾನಸಭೆಯಲ್ಲಿಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಅವರು, ತಮ್ಮ ಚಿಕ್ಕಮಗಳೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ಸ್ಥಾಪಿಸಲು ವಿಳಂಬವಾಗಲು ಕಾರಣವೇನು ಎಂದು ಪ್ರಶ್ನಿಸಿದರು.  ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಪರವಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಉತ್ತರ ನೀಡಿ, 2017-18ನೇ ಸಾಲಿನ ಬಜೆಟ್‍ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ಘೋಷಿಸಲಾಗಿದೆ ಎಂದರು.

ಇದನ್ನು ವಿರೋಧಿಸಿದ ರವಿ, 2013ರ ಮಾರ್ಚ್ 12ರಂದು ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ಸಂಪುಟದಲ್ಲಿ ನಿರ್ಣಯಿಸಲಾಗಿದೆ. 2014ರಿಂದಲೂ ತಾಲ್ಲೂಕಿನ ಅಂಬಾಳೆ ಹೋಬಳಿಯ ಕದ್ರಿಮಿದ್ರಿ ಗ್ರಾಮದ 30ಎಕರೆ ಗೋಮಾಳ ಭೂಮಿಗೆ ವೈದ್ಯಕೀಯ ಕಾಲೇಜು ಜಾಗ ಎಂದು ಪಹಣಿ ಬರೆಸಲಾಗಿದೆ. ಸಚಿವರು 2017-18ರ ಬಜೆಟ್‍ನಲ್ಲಿ ಕಾಲೇಜು ಘೋಷಿಸಲಾಗಿದೆ ಎನ್ನುತ್ತಾರೆ. ಸರ್ಕಾರ ಯಾವುದೇ ಇದ್ದರೂ ಪ್ರಕ್ರಿಯೆಗಳು ನಿರಂತರ. ಈ ರೀತಿಯ ಉತ್ತರಗಳು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವೇಳೆ ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ಶಾಸಕ ಕೆ.ಎನ್.ರಾಜಣ್ಣ, ತುಮಕೂರು ಜಿಲ್ಲೆಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. 5 ಕೋಟಿ ಹಣವನ್ನೂ ಒದಗಿಸಲಾಗಿತ್ತು. ಆದರೆ, ಈವರೆಗೂ ಕಾಲೇಜು ಆರಂಭವಾಗಿಲ್ಲ. ವಿಳಂಬಕ್ಕೆ ಕಾರಣಗೇಳು ಎಂದು ಪ್ರಶ್ನಿಸಿದರು.
ಸಭಾಧ್ಯಕ್ಷ ಸ್ಥಾನದಲ್ಲಿದ್ದ ಉಪಾಧ್ಯಕ್ಷರಾದ ಶಿವಶಂಕರ್‍ರೆಡ್ಡಿ ಅವರು, ಚಿಕ್ಕಬಳ್ಳಾಪುರ ಜಿಲ್ಲೆಗೂ ಕಾಲೇಜು ಮಂಜೂರಾಗಿದೆ. ಆದರೆ ಆರಂಭಗೊಂಡಿಲ್ಲ ಎಂದಾಗ, ಇದು ಬಹಳಷ್ಟು ಜಿಲ್ಲೆಗಳ ಸಮಸ್ಯೆಯಾಗಿದೆ. ಹಾಗಾಗಿ ಅರ್ಧಗಂಟೆ ಕಾಲ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ರಾಜಣ್ಣ ಮನವಿ ಮಾಡಿದರು. ಸಭಾಧ್ಯಕ್ಷರು ಅದಕ್ಕೆ ಒಪ್ಪಿಗೆ ಸೂಚಿಸಿದರು.

ಜೆಡಿಎಸ್‍ನ ಶಾಸಕ ಎಚ್.ಡಿ.ರೇವಣ್ಣ ಅವರು, ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಮೂರನೇ ಹಂತದ ಕಾಮಗಾರಿ ಆರಂಭವಾಗದೆ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಒಂದೇ ಒಂದು ಪಿಜಿ ಕೋರ್ಸ್‍ಗೂ ಅರ್ಜಿ ಸ್ವೀಕರಿಸಲಾಗುತ್ತಿಲ್ಲ. ಈ ವಿಷಯವನ್ನು ಅರ್ಧಗಂಟೆ ಚರ್ಚೆಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದರು. ಅದಕ್ಕೆ ಸಭಾಧ್ಯಕ್ಷರು ಒಪ್ಪಿಗೆ ಸೂಚಿಸಿದ್ದರಿಂದ ಚರ್ಚೆ ಅಂತ್ಯವಾಯಿತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin