ವೈದ್ಯರು, ಸಿಬ್ಬಂದಿ ವರ್ಗಾವಣೆ ಮಸೂದೆ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

Session-001

ಬೆಂಗಳೂರು, ಜೂ.20- ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳ ವರ್ಗಾವಣೆಯನ್ನು ಶೇ.5ರಿಂದ ಶೇ.15ಕ್ಕೆ ಹೆಚ್ಚಳ ಮಾಡುವ ಅವಕಾಶ ಕಲ್ಪಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ-2017ಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆಯಿತು. ಒಂದೇ ಸ್ಥಳದಲ್ಲಿ 10 ವರ್ಷ ಸೇವೆ ಪೂರೈಸಿದ ಹೆಚ್ಚಿನ ಸಂಖ್ಯೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲು ಈ ವಿಧೇಯಕ ತರಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‍ಕುಮಾರ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ 40 ಸಾವಿರ ಉದ್ಯೋಗಗಳಿದ್ದು, ಜನಾನುರಾಗಿ ಹಾಗೂ ಒಳ್ಳೆಯವರನ್ನು ವರ್ಗಾವಣೆ ಮಾಡುವುದಿಲ್ಲ.

ಆದರೆ, ದೂರುಗಳು ಇರುವವರನ್ನು ವರ್ಗಾವಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 2353 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 146 ತಾಲೂಕು ಆಸ್ಪತ್ರೆಗಳು, 31 ಜಿಲ್ಲಾಸ್ಪತ್ರೆಗಳಿದ್ದು, ಕೇವಲ 58 ಮಂದಿ ಮಾತ್ರ ಸಾಮಾನ್ಯ ವೈದ್ಯ ಕರ್ತವ್ಯಾಧಿಕಾರಿಗಳ ಹುದ್ದೆ ಖಾಲಿ ಇವೆ. ಉಳಿದ ಎಲ್ಲ ಹುದ್ದೆಗಳೂ ಭರ್ತಿಯಾಗಿವೆ ಎಂದರು.1130 ತಜ್ಞ ವೈದ್ಯ ಹುದ್ದೆಗಳ ಕೊರತೆ ಇದ್ದು, ವೈದ್ಯರು ನೇಮಕಾತಿಗೆ ಮುಂದೆ ಬರುತ್ತಿಲ್ಲ. ಆದರೆ, ಸ್ವಾವಲಂಬನೆ ಸಾಧಿಸಲು ಸ್ನಾತಕೋತ್ತರ ಡಿಪ್ಲಮೋ ಕೋರ್ಸ್ ಪ್ರಾರಂಭಿಸಲಾಗುತ್ತಿದೆ. ಆರಂಭದಲ್ಲಿ ಜಯನಗರ ಸಾರ್ವಜನಿಕ ಆಸ್ಪತ್ರೆ ಮತ್ತು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಆರಂಭಿಸಲಾಗುತ್ತಿದೆ.

7 ಸಾವಿರ ಅರೆ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. 3 ಸಾವಿರ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ವಿಶೇಷ ನೇಮಕಾತಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಹೆಚ್ಚಿನ ಹಣ ನೀಡಿದರೆ ಹಳ್ಳಿಗಳಿಗೆ ತಜ್ಞ ವೈದ್ಯರು ಬರುತ್ತಾರೆಂದರೆ ತಳಿರುತೋರಣ ಕಟ್ಟಿ ಸ್ವಾಗತಿಸೋಣ ಎಂದು ಶಾಸಕ ಶಿವಾನಂದ ಪಾಟೀಲರ ಪ್ರಸ್ತಾಪಕ್ಕೆ ಸಚಿವರು ಪ್ರತಿಕ್ರಿಯಿಸಿದರು. ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಡಿ.ಎನ್.ಜೀವರಾಜ್, ಶಿವಮೂರ್ತಿ, ಕೋನರೆಡ್ಡಿ ಈ ವಿಧೇಯಕ ಕುರಿತು ಕೆಲವು ಉಪಯುಕ್ತ ಸಲಹೆ ನೀಡಿದರು. ಇದಾದ ಬಳಿಕ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ವಿಧೇಯಕವನ್ನು ಮತಕ್ಕೆ ಹಾಕಿದಾಗ ಸರ್ವಾನುಮತದ ಅನುಮೋದನೆ ದೊರೆಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin