ವೈರಲ್ ಆಯ್ತು ಮಾರುಕಟ್ಟೆಯಲ್ಲಿ ದಂಪತಿ ಮೇಲೆ ಕಾಮುಕರು ಹಲ್ಲೆ ಮಾಡಿದ ವಿಡಿಯೋ

ಈ ಸುದ್ದಿಯನ್ನು ಶೇರ್ ಮಾಡಿ


ಮೈನ್‍ಪುರಿ, ಡಿ.22- ಮಹಿಳೆಯೊಬ್ಬಳನ್ನು ಚುಡಾಯಿಸುತ್ತಿದ್ದುದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ದಂಪತಿಗೆ ಗೂಂಡಾಗಳು ಜನನಿಬಿಡ ಮಾರುಕಟ್ಟೆಯಲ್ಲಿ ನೂರಾರು ಜನರ ಎದುರೇ ಬಡಿಗೆಯಿಂದ ಮನಸೋಇಚ್ಚೆ ಥಳಿಸಿ ಕ್ರೌಯ ಮೆರೆದ ಹೇಯ ಘಟನೆ ಉತ್ತರ ಪ್ರದೇಶದ ಮೈನ್‍ಪುರಿಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು ದುಷ್ಕರ್ಮಿಗಳ ಹಿಂಸಾಚಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅರವಿಂದ ತಿವಾರಿ ಮತ್ತು ವಂದನಾ ತಿವಾರಿ ಎಂಬ ದಂಪತಿ ತಮ್ಮ ಮಗನೊಂದಿಗೆ ಮೈನ್‍ಪುರಿಯ ಕಿಶ್ನಿ ಪ್ರದೇಶದಲ್ಲಿ ಮಾರುಕಟ್ಟೆಗೆ ತೆರಳಿದ್ದರು. ಆಗ ಮಹಿಳೆಯೊಬ್ಬಳು ಅಲ್ಲಿದ್ದ ಇಬ್ಬರು ಯುವಕರ ಬಳಿ ವಿಳಾಸವೊಂದನ್ನು ವಿಚಾರಿಸುತ್ತಿದ್ದಾಗ ಆತ ಅಸಭ್ಯ ಉತ್ತರ ನೀಡಿದ. ಈ ಬಗ್ಗೆ ವಂದನಾ ಮತ್ತು ಅರವಿಂದ ಆಕ್ಷೇಪ ವ್ಯಕ್ತಪಡಿಸಿದಾಗ ಅಲ್ಲಿದ್ದ ಕಾಮುಕರ ಗುಂಪೊಂದು ದಂಪತಿ ಮೇಲೆ ಕಟ್ಟಿಗೆಗಳು ಮತ್ತು ಬಡಿಗೆಗಳಿಂದ ನಿರ್ದಯವಾಗಿ ತೀವ್ರ ಹಲ್ಲೆ ನಡೆಸಿದರು. ಈ ಘಟನೆ ನಡೆದಾಗ ಆ ಪ್ರದೇಶದಲ್ಲಿ ನೂರಾರು ಮಂದಿ ಮೂಕ ಪ್ರೇಕ್ಷಕರಾಗಿದ್ದರು.

ಹಲ್ಲೆಗೊಳಗಾದ ವಂದನಾ ಅವರ ತಲೆಯಿಂದ ರಕ್ತ ಸುರಿಯುತ್ತಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತು. ಅನಂದ್ ಯಾದವ್ ಎಂಬಾತನನ್ನು ಬಂಧಿಸಿದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಆತನನ್ನು ಬಿಡುಗಡೆ ಮಾಡಿದ್ದಾರೆ. ಸ್ಥಳೀಯವಾಗಿ ಆತನಿಗೆ ಇರುವ ಪ್ರಭಾವವೇ ಇದಕ್ಕೆ ಕಾರಣ ಎನ್ನಲಾಗಿದೆ. ಕ್ರೌರ್ಯದ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್  ಆಗಿದ್ದು, ಗೂಂಡಾಗಳ ಕೃತ್ಯದ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin