ವೋಟ್ ಹಾಕಿದ ಬೆರಳಿನ ಶಾಹಿ ತೋರಿಸಿ ಹೊಟೇಲ್‍ಗಳಲ್ಲಿ ಶೇ.5ರಷ್ಟು ವಿನಾಯಿತಿ ಪಡೆಯಿರಿ..!

ಈ ಸುದ್ದಿಯನ್ನು ಶೇರ್ ಮಾಡಿ

Voting--012

ಬೆಂಗಳೂರು, ಮಾ.30- ಮತದಾನ ಮಾಡಿದ ದಿನ ಬೆರಳಿಗೆ ಹಾಕುವ ಶಾಹಿ ತೋರಿಸಿ ವ್ಯಾಪಾರ ವಹಿವಾಟು ಕೇಂದ್ರ ಹಾಗೂ ಹೊಟೇಲ್‍ಗಳಲ್ಲಿ ಶೇ.5ರಷ್ಟು ವಿನಾಯಿತಿ ಪಡೆಯಬಹುದಾಗಿದೆ.   ನಗರ ಪ್ರದೇಶಗಳಲ್ಲಿ ಕ್ಷೀಣಿಸುತ್ತಿರುವ ಶೇಕಡಾವಾರು ಮತದಾನವನ್ನು ಹೆಚ್ಚಿಸುವ ಉದ್ದೇಶದಿಂದ ಇಂತಹ ಒಂದು ಪ್ರಯತ್ನಕ್ಕೆ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಮುನ್ನುಡಿ ಬರೆದಿದ್ದಾರೆ. ಮತದಾನದಲ್ಲಿ ಪಾಲ್ಗೊಳ್ಳುವವರಿಗೆ ಶೇ.5ರಷ್ಟು ವಿನಾಯಿತಿ ನೀಡುವ ಕುರಿತಂತೆ ಚರ್ಚಿಸಲು ನಾಳೆ ಮಲ್ಲೇಶ್ವರಂನಲ್ಲಿ ಮಾಲ್, ಮಳಿಗೆ , ಹೊಟೇಲ್ ಮಾಲೀಕರ ಮತ್ತು ನಿರ್ವಾಹಕರ ಸಭೆ ಕರೆದಿದ್ದಾರೆ.

ಮತದಾನವನ್ನು ಪ್ರೋತ್ಸಾಹಿಸುವ ಇಚ್ಛೆ ಹೊಂದಿರುವ ಮಾಲೀಕರುಗಳು ಈ ಸಭೆಯಲ್ಲಿ ಸ್ವ ಇಚ್ಛೆಯಿಂದ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.57 ಹಾಗೂ ಲೋಕಸಭಾ ಚುನಾವಣೆಯಲ್ಲಿ ಶೇ.52ರಷ್ಟು ಮತದಾನವಾಗಿತ್ತು. ಮತದಾನ ಸಂದರ್ಭದಲ್ಲಿ ನಗರವಾಸಿಗಳು ಚುನಾವಣೆಯ ಮಹತ್ವ ಮರೆತು ಊರುಗಳಿಗೆ ತೆರಳುವುದು ಮಾಮೂಲು ವಾಡಿಕೆಯಾಗಿದೆ. ಈ ಧೋರಣೆಯನ್ನು ತಪ್ಪಿಸಿ ಮತದಾರರು ತಮ್ಮ ಮನೆಯಲ್ಲೇ ಉಳಿದುಕೊಂಡು ಮತದಾನ ಪ್ರಕ್ರಿಯೆ ನಂತರ ಒರಾಯನ್ ಮಾಲ್ , ಗರುಡಾಮಾಲ್, ಮಂತ್ರಿ ಮಾಲ್, ಜಿ.ಟಿ.ಮಾಲ್ ಮತ್ತಿತರ ವ್ಯಾಪಾರ ಕೇಂದ್ರಗಳಿಗೆ ತೆರಳಿ ಮತದಾನ ಮಾಡಿದ ಶಾಹಿ ಗುರುತು ತೋರಿಸಿ ಶೇ.5ರಷ್ಟು ವಿನಾಯಿತಿ ಪಡೆಯಬಹುದಾಗಿದೆ.

ಅದೇ ರೀತಿ ಹೊಟೇಲ್‍ಗಳಲ್ಲೂ ಶಾಹಿ ಗುರುತು ತೋರಿಸಿ ತಿಂಡಿ ತಿನಿಸುಗಳ ಮೇಲೂ ರಿಯಾಯ್ತಿ ನೀಡಬೇಕು ಎಂದು ಹೊಟೇಲ್ ಮತ್ತು ಮಾಲ್ ಮಾಲೀಕರಿಗೆ ನಾಳಿನ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದು ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ. ಒಟ್ಟಾರೆ ನಗರದಲ್ಲಿ ಕ್ಷೀಣಿಸುತ್ತಿರುವ ಶೇಕಡವಾರು ಮತದಾನವನ್ನು ಹೆಚ್ಚಳ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

Facebook Comments

Sri Raghav

Admin