ಶಂಕಿತ ಶಸ್ತ್ರಧಾರಿಯ ರೇಖಾಚಿತ್ರ ಬಿಡುಗಡೆ, ಮುಂಬೈ ಹೈ ಅಲರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Suspect

ಮುಂಬೈ ಸೆ. 23 : ವಾಣಿಜ್ಯ ನಗರಿ ಮುಂಬೈನಲ್ಲಿ ಗುರುವಾರ ಶಸ್ತ್ರಾಸ್ತ್ರ ಒಯ್ಯುತ್ತಿದ್ದ ಶಂಕಿತರಿಗಾಗಿ ವ್ಯಾಪಕ ಶೋಧ ನಡೆಯುತ್ತಿರುವಂತೆಯೇ ಶುಕ್ರವಾರ ಶಂಕಿತ ಉಗ್ರನ ರೇಖಾ ಚಿತ್ರ ಬಿಡುಗಡೆ ಮಾಡಲಾಗಿದೆ.  ಶಾಲಾ ಮಕ್ಕಳು ನೀಡಿದ ಮಾಹಿತಿ ಮೇರೆಗೆ ರೇಖಾಚಿತ್ರ ತಜ್ಞರಿಂದ ಚಿತ್ರ ಬಿಡಿಸಲಾಗಿದ್ದು, ಮುಂಬೈ ನಗರಾದ್ಯಂತ ಈ ಚಿತ್ರವನ್ನು ಎಲ್ಲ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿದ್ದು, ಮುಂಬೈ ನಗರಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇದೇ ವೇಳೆ ಮುಂಬೈ ಕರಾವಳಿ ತೀರದಲ್ಲಿರುವ ನೌಕಾ ಶಸ್ತ್ರಾಸ್ತ್ರ ಸಂಗ್ರಹಾಗಾರ “ಐಎನ್ ಎಸ್ ಅಭಿಮನ್ಯು” ಘಟಕಕ್ಕೆ ಒದಗಿಸಲಾಗಿರುವ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಉಗ್ರ ನಿಗ್ರಹ ದಳ ಹಾಗೂ ಇತರ ಭದ್ರತಾ ದಳಗಳೊಂದಿಗೆ ಭಾರತೀಯ ನೌಕಾ ಪಡೆಯನ್ನು ಗಣನೀಯ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ ಸಾಗರ ಭದ್ರತಾ ಪಡೆಯ ಮಾರ್ಕೋಸ್ ಕಮಾಂಡೋಗಳನ್ನು ಉರಾನ್ ನೌಕಾ ನೆಲೆಗೆ ರವಾನಿಸಲಾಗಿದ್ದು, ಮುಂಬಯಿ ಪೊಲೀಸರು ನಗರಾದ್ಯಂತ ನಾಕಾಬಂದಿ ಜಾರಿಗೊಳಿಸಿ ಪರಿಸ್ಥಿತಿಯನ್ನು ಕಟ್ಟೆಚ್ಚರದಿಂದ ಅವಲೋಕಿಸುತ್ತಿದ್ದಾರೆ. ಅಂತೆಯೇ ಕೊಲಾಬಾ ಪೊಲೀಸ್ ದಳ ಕೂಡ ತನ್ನ ಉನ್ನತ ಅಧಿಕಾರಿಗಳನ್ನು ವಿಚಕ್ಷಣಾ ಕಾರ್ಯಕ್ಕೆ ನಿಯೋಜಿಸಿದೆ. ಇವರಿಗೆ ಎನ್ ಎಸ್ ಜಿ ಕಮಾಂಡೋಗಳು ಕೂಡ ಇಂದು ಸಾಥ್ ನೀಡಲಿದ್ದು, ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಲಿದ್ದಾರೆ. ಶಸ್ತ್ರಾಸ್ತ್ರ ಸಹಿತ ವ್ಯಕ್ತಿಗಳು ನಗರದಲ್ಲಿ ಅಲೆಯುತ್ತಿರುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲವಾದರೂ 2008ರಲ್ಲಿ ಮುಂಬೈ ಉಗ್ರ ದಾಳಿ ಹಿನ್ನಲೆಯಲ್ಲಿ ಪ್ರಸ್ತುತ ಶಾಲಾ ಮಕ್ಕಳು ನೀಡಿರುವ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin