ಶತಮಾನದಷ್ಟು ಹಳೆ ನಕ್ಷೆಯೇ ಒತ್ತುವರಿ ತೆರವು ಗೊಂದಲಕ್ಕೆ ಕಾರಣ

ಈ ಸುದ್ದಿಯನ್ನು ಶೇರ್ ಮಾಡಿ

Bangalower-nx-cv-c

ಬೆಂಗಳೂರು, ಆ.26- ಒಂದು ಶತಮಾನಕ್ಕಿಂತ ಹಳೆಯದಾದ ನಕ್ಷೆ (ಮ್ಯಾಪ್) ಇಟ್ಟುಕೊಂಡು ಸರ್ಕಾರ ಮತ್ತು ಮಹಾನಗರ ಪಾಲಿಕೆಗಳು ಒತ್ತುವರಿ ತೆರವಿಗೆ ಮುಂದಾಗಿರುವುದೇ ಇಷ್ಟೆಲ್ಲ ಗೊಂದಲಗಳು ಮತ್ತು ತೊಂದರೆಗಳಿಗೆ ಕಾರಣವಾಗಿರುವುದು, ಸಾವಿರಾರು ಜನ ಮನೆ ಕಳೆದುಕೊಂಡು ಬೀದಿಗೆ ಬೀಳುತ್ತಿರುವುದು ಎಂಬ ಆರೋಪ ಕೇಳಿಬಂದಿದೆ. ಕಾರ್ಯಾಚರಣೆ ವೇಳೆ ಸಾವಿರಾರು ಮಂದಿ ಮನೆ ಕಳೆದುಕೊಳ್ಳಲು ಮುಖ್ಯ ಕಾರಣ ಬಿಬಿಎಂಪಿ ಇಂದಿಗೂ ಸಾಕಷ್ಟು ಹಳೆಯ ಕಾಲದ ಬೆಂಗಳೂರಿನ ನಕ್ಷೆಯನ್ನೇ ಆಧರಿಸಿ ತೆರವು ಕಾರ್ಯಾಚರಣೆ ನಡೆಸುತ್ತಿರುವುದೇ ಆಗಿದೆ.  ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕೆಲ ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅನುಸರಿಸುತ್ತಿರುವುದು 1908ರಲ್ಲಿ ಜಾರಿಯಲ್ಲಿದ್ದ ನಕ್ಷೆ ಎಂಬುದು ಆತಂಕಕಾರಿ ವಿಷಯ. ಇದು ಸಾಕಷ್ಟು ಹಳೆಯದಾಗಿದೆ. ಇಂತಹ ಹಳೆಯದಾದ ನಕ್ಷೆ ಆಧರಿಸಿ ಆಧುನಿಕ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ಹಲವಾರು ತೊಂದರೆಗಳಿಗೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.
ಅಂದು ಬೆಂಗಳೂರು 5 ಲಕ್ಷಕ್ಕೂ ಕಡಿಮೆ ಜನಸಂಖ್ಯೆಯುಳ್ಳ ಒಂದು ಪುಟ್ಟ ನಗರವಾಗಿತ್ತು. ಆದರೆ, ಈಗ ಎಲ್ಲ ಗಡಿಗಳನ್ನೂ ಮೀರಿ ನಗರ ಬೆಳೆದಿದೆ. ಹಾಗಿದ್ದರೂ ಹಳೆಯ ನಕ್ಷೆ ಆಧರಿಸಿ ಕಾರ್ಯಾಚರಣೆಗಿಳಿದಿರುವುದು ಸರಿಯಲ್ಲ. ಇತ್ತೀಚಿನ ಹಾಗೂ ನಿಖರವಾದ ನಕ್ಷೆ ಆಧರಿಸಿ ಕಾರ್ಯಾಚರಣೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕವಾಗಿ ಹಳೆಯ ನಕ್ಷೆ ಆಧರಿಸಿ ಕಾರ್ಯಾಚರಣೆಗಿಳಿದಿದೆ. ಇಂತಹ ನಕ್ಷೆಗಳು 21ನೆ ಶತಮಾನದಲ್ಲಿ ಬಳಸಲು ಯೋಗ್ಯವಲ್ಲದ್ದಾಗಿದೆ. ನೂರು ವರ್ಷಗಳ ಹಿಂದೆ ಪ್ರಸ್ತುತ ಇರುವ ನಗರದ ಶೇ.5ರಷ್ಟು ನಗರ ಅಭಿವೃದ್ಧಿಯಾಗಿರಲಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿದ್ದ ಕೆರೆಗಳನ್ನು ಸಂಪರ್ಕಿಸುವ ಕಾಲುವೆಗಳು ಅತಿಕ್ರಮಣದಿಂದಾಗಿ ಮುಚ್ಚಿಹೋಗಿವೆ. ಆದರೆ, ಈಗ ಅತಿ ಹಳೆಯದಾದ ನಕ್ಷೆ ಆಧರಿಸಿ ಒತ್ತುವರಿ ತೆರವು ಮಾಡುತ್ತಿರುವುದರಿಂದ ಜನ ಆಘಾತಕ್ಕೊಳಗಾಗುವಂತಾಗಿದೆ. ಹಾಗಿದ್ದೂ ಸಹ ಬೆಂಗಳೂರಿನ ಕೆರೆಗಳು ಕಾಲುವೆಗಳಿಗೆ ಉತ್ತಮ ಸಂಪರ್ಕ ಹೊಂದಿದ್ದು, ಬಳಕೆಯಾದ ನೀರು ಸುಲಭವಾಗಿ ಒಣಗುವ ಸ್ಥಿತಿ ಇದೆ. ಈಗಾಗಲೇ ಅತಿಕ್ರಮಣ ಮಾಡಿ ನಿರ್ಮಿಸಿರುವ ಮನೆಗಳಿಂದಾಗಿ ನಗರದಲ್ಲಿ ಹಳೆಯ ಒಳಚರಂಡಿ ವ್ಯವಸ್ಥೆ ನಾಶವಾಗಿರುವುದರಿಂದ ಮಳೆ ಸಂದರ್ಭದಲ್ಲಿ ಕೆಲ ಬಡಾವಣೆಗಳು ಜಲಾವೃತವಾಗಿದ್ದವು ಎಂಬ ಕಾರಣದಿಂದ ತೆರವು ಕಾರ್ಯಾಚರಣೆಯೇನೋ ಸರಿಯಾಗಿದ್ದರೂ ಇದಕ್ಕಾಗಿ ಬಳಸುತ್ತಿರುವ ನಕ್ಷೆ ಮಾತ್ರ ಸೂಕ್ತವಾದುದಲ್ಲ. ಇದಕ್ಕೆ ಬಿಬಿಎಂಪಿ ಬಳಿ ನೂತನ ನಕ್ಷೆ ಇಲ್ಲದಿರುವುದು ಕಾರಣವಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಹಾಗಾಗಿ ಭೂಮಿ ದಾಖಲೆಗಳನ್ನು ನಂಬುವಂತಿಲ್ಲ. ಸರ್ಕಾರ ಭ್ರಷ್ಟ ಪಾಲಿಕೆ ಅಧಿಕಾರಿಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿರುವುದು ದುರಂತ. ಯಾವುದೇ ಕಾರಣಕ್ಕೂ ತೆರವು ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಮೇಯರ್ ಮಂಜುನಾಥರೆಡ್ಡಿಯವರು ವೈಜ್ಞಾನಿಕವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ನಾವು ಈಗಾಗಲೇ ಎಲ್ಲ ರೀತಿಯ ಎಚ್ಚರಿಕೆ ಕ್ರಮ ಕೈಗೊಂಡು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಮುಂದಾಗಿದ್ದೇವೆ. ಅಲ್ಲದೆ, ನಕ್ಷೆ ಪರಿಶೀಲನೆ ನಡೆಸಿ ಆನಂತರವಷ್ಟೇ ಅದನ್ನು ಆಧರಿಸಿ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.  ಅದೇ ರೀತಿ ಬಿಬಿಎಂಪಿ ಆಯುಕ್ತರಾದ ಮಂಜುನಾಥ ಪ್ರಸಾದ್ ಅವರು ನನ್ನ ಆದ್ಯತೆ ಅತಿಕ್ರಮಣ ಮಾಡುವುದನ್ನು ತೆರವುಗೊಳಿಸುವ ಮೂಲಕ ಬತ್ತಿ ಹೋಗಿರುವ ರಾಜಕಾಲುವೆಯ ಸಂಪರ್ಕಗಳನ್ನು ಗುರುತಿಸಿ ನಗರದ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸುವುದಾಗಿದೆ ಎಂದು ಹೇಳಿದ್ದಾರೆ.ಅತಿ ಹಳೆಯದಾದ ನಕ್ಷೆಯಿಂದಾಗಿ ಪ್ರಸ್ತುತ ಹಲವಾರು ಜನಪ್ರತಿನಿಧಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ನಗರದ ಸಾಮಾನ್ಯ ಜನರು ಗುರಿಯಾಗಿ ಮನೆ-ಮಠ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಯಾರೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಆದರೆ, ಈ ಎಲ್ಲ ಬೆಳವಣಿಗೆಗಳ ನಡುವೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ಕಸ ವಿಲೇವಾರಿ ವಿಶ್ವಮಟ್ಟದಲ್ಲಿ ಹೆಸರು ಕೆಡಿಸಿಕೊಂಡಿತ್ತು. ಅದನ್ನು ಬಿಟ್ಟರೆ ಇತ್ತೀಚೆಗೆ ಹಲವು ಬಡಾವಣೆಗಳು ಮಳೆ ನೀರಲ್ಲಿ ಮುಳುಗಿಹೋಗಿದ್ದ ಘಟನೆಯೂ ಅಷ್ಟೇ ಅಚ್ಚರಿ ಮೂಡಿಸಿತ್ತು. ಮುಖ್ಯಮಂತ್ರಿಗಳು ಬೆಲ್ಜಿಯಂನಲ್ಲಿದ್ದರೂ ಈ ಅವಾಂತರದ ಬಗ್ಗೆ ತಿಳಿದು ಸತತವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು.  ಈ ಅವಾಂತರಕ್ಕೆ ಕಾರಣ ಅರಿತ ಮುಖ್ಯಮಂತ್ರಿಗಳು ಇದಕ್ಕೆ ಕಾರಣವಾದ ಒತ್ತುವರಿ ತೆರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಆದರೆ, ತೆರವಿಗೆ ಆಧರಿಸುತ್ತಿರುವ ನಕ್ಷೆ ಮಾತ್ರ ಸೂಕ್ತವಾದುದಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.  ಈ ನಿಟ್ಟಿನಲ್ಲಿ ಸೂಕ್ತ ಪರಿಶೀಲನೆ ನಡೆದು ಕ್ರಮ ಕೈಗೊಂಡು ಒತ್ತುವರಿ ತೆರವು ಮಾಡಬೇಕಾದುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin