ಶತ್ರುದೇಶದ ಪರ ಮಾತನಾಡಿದ ರಮ್ಯಾ ವಿರುದ್ಧ ತೀವ್ರಗೊಂಡ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Ramya

ಬೆಂಗಳೂರು, ಆ.25-ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹೇಳಿರು ವಂತೆ ಪಾಕಿಸ್ತಾನ ನರಕವಲ್ಲ, ಅಲ್ಲೂ ಒಳ್ಳೆಯ ಜನರಿದ್ದಾರೆ ಎಂದು ಹೇಳುವ ಮೂಲಕ ಸಾಂಪ್ರದಾಯಿಕ ಶತ್ರುದೇಶದ ಪರ ಮಾತನಾಡಿದ ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಅವರ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿವೆ. ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲೂ ಆರಂಭವಾಗಿದೆ. ಪಾಕಿಸ್ತಾನವನ್ನು ಬೆಂಬಲಿಸಿ ಮಾತನಾಡಿರುವ ರಮ್ಯಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಇಲ್ಲವೆ ಪಾಕಿಸ್ತಾನಕ್ಕೆ ಹೋಗಿ ನೆಲೆಸಬೇಕು ಎಂದು ಪ್ರತಿಭಟನೆ ನಡೆಸಿರುವ ವಿವಿಧ ಸಂಘಟನೆಗಳವರು ರಮ್ಯಾ ಅವರ ವರ್ತನೆಯನ್ನು ಖಂಡಿಸಿದ್ದಾರೆ.

ಇಂದು ಹುಬ್ಬಳ್ಳಿ, ಧಾರವಾಡ, ಕಾರವಾರ ಮುಂತಾದೆಡೆ ರಮ್ಯಾ ವಿರುದ್ಧ ಪ್ರತಿಭಟನೆ ಗಳು ನಡೆದಿವೆ. ಅವರ ಫ್ಲೆಕ್ಸ್, ಕಟೌಟ್ಗಳಿಗೆ ಬೆಂಕಿ ಹಚ್ಚಿ ರಮ್ಯಾ ಹಠಾವೋ, ದೇಶ್ ಬಚಾವೋ ಘೋಷಣೆಗಳನ್ನು ಕೂಗಿದ್ದಾರೆ.  ಇಂದು ಬೆಳಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಪಾಕಿಸ್ತಾನ ಪರ ಮಾತನಾಡುವ ರಮ್ಯಾ ಅವರಿಗೆ ಕಾಂಗ್ರೆಸ್ ನಾಯಕರು ಬುದ್ಧಿ ಹೇಳುವುದು ಬಿಟ್ಟು, ಅದನ್ನು ಸಮರ್ಥಿಸಿ ಕೊಳ್ಳಲು ಮುಂದಾಗಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.  ಹುಬ್ಬಳ್ಳಿ, ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ರಮ್ಯಾ ಅವರ ದೇಶ ವಿರೋಧಿ ಹೇಳಿಕೆ ಬಗ್ಗೆ ಪ್ರತಿಭಟನೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಬಿಜೆಪಿ, ಭಜರಂಗದಳ, ವಿಎಚ್ಪಿ ಸಂಘಟನೆಯವರು ರಮ್ಯಾ ಅವರಿಗೆ ದೇಶಪ್ರೇಮವಿಲ್ಲ, ದೇಶಪ್ರೇಮವಿದ್ದಿದ್ದರೆ ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ. ಸದಾ ನಮ್ಮ ದೇಶದ ಮೇಲೆ ವಿಷ ಕಾರುತ್ತಿರುವ ಪಾಕಿಸ್ತಾನವನ್ನು ಒಳ್ಳೆಯ ದೇಶವನ್ನು ಕರೆದಿರುವ ರಮ್ಯಾ ಅವರ ಮನಸ್ಥಿತಿ ಎಂಥೆದೆಂಬುದು ಅರ್ಥವಾಗುತ್ತದೆ ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತರ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ರಮ್ಯಾ ಪ್ರತಿಕೃತಿ ದಹನ ಮಾಡಲಾಯಿತು. ಪಾಕಿಸ್ತಾನದ ಬಗ್ಗೆ ನಟಿ, ಮಾಜಿ ಸಂಸದೆ ರಮ್ಯಾ ಮಾತನಾಡಿರುವುದು ಸಮಂಜಸವಲ್ಲ ಎಂದು ಅಲ್ಪಸಂಖ್ಯಾತ ಘಟಕದ ಮುಖಂಡ ಅಬ್ದುಲ್ ಖಂಡಿಸಿದ್ದಾರೆ.

ದೇಶ, ಭಾಷೆ, ನೆಲ, ಜಲದ ಬಗ್ಗೆ ಅಭಿಮಾನವಿರಬೇಕು. ಸೌಹಾರ್ದ ಬಾಂಧವ್ಯ ಬೆಳೆಸಲು ನಮ್ಮ ದೇಶದ ಮುಖಂಡರು ಮುಂದಾದರೆ ಬಾಂಬ್ ಯುದ್ಧ ಮಾಡಲು ಅವರು ಮುಂದಾಗುತ್ತಾರೆ. ಇಂತಹ ದೇಶವನ್ನು ನರಕವಲ್ಲದೆ ಇನ್ನೇನು ಹೇಳಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು, ಮಂಡ್ಯ, ಮದ್ದೂರು ಮುಂತಾದ ಕಡೆಯೂ ಇಂದು ಪ್ರತಿಭಟನೆ ನಡೆದಿದೆ.   ಇಂದು ರಮ್ಯಾ ಅವರು ಮಂಗಳೂರಿಗೆ ಭೇಟಿ ನೀಡಬೇಕಿತ್ತು. ಆದರೆ ಅಲ್ಲಿ ಭಜರಂಗದಳ ಹಾಗೂ ವಿಎಚ್ಪಿ ಸಂಘಟನೆಯವರು ಯಾವುದೇ ಕಾರಣಕ್ಕೂ ರಮ್ಯಾ ಅವರ ಮಂಗಳೂರು ಭೇಟಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಒಟ್ಟಾರೆ ರಮ್ಯಾ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ನಾನು ನನ್ನ ಹೇಳಿಕೆಗೆ ಬದ್ಧಳಾಗಿದ್ದೇನೆ. ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ತಮ್ಮ ಮೊಂಡುತನವನ್ನು ಮುಂದುವರೆಸಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವುದರಿಂದ ಮತ್ತಷ್ಟು ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin