ಶನಿವಾರದಿಂದ ‘ಮುಂಗಾರು’ ಮಳೆ’ ಶುರು

ಈ ಸುದ್ದಿಯನ್ನು ಶೇರ್ ಮಾಡಿ

mungaru-male
ಅಂತೂ ಬಹುನಿರೀಕ್ಷಿತ ಮುಂಗಾರು ಮಳೆ-2 ಚಿತ್ರದ ಬಿಡುಗಡೆಗೆ ಕೌಂಟ್‍ಡೌನ್ ಆರಂಭವಾಗಿದೆ. ಈಗಾಗಲೇ ತನ್ನ ಹಾಡುಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಸದ್ದು ಮಾಡುತ್ತಿರುವ ಶಶಾಂಕ್ ನಿರ್ದೇಶನದ ಮುಂಗಾರು ಮಳೆ-2 ಚಿತ್ರ ಒಂದು ದಿನ ತಡವಾಗಿ ಅಂದರೆ ಶನಿವಾರದಂದು ತೆರೆಗೆ ಬರುತ್ತಿದೆ. ಇದರಿಂದ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿರುವ ಗೋಲ್ಡನ್‍ಸ್ಟಾರ್ ಗಣೇಶ್ ಅಭಿಮಾನಿಗಳ ಚಡಪಡಿಕೆ ಇನ್ನಷ್ಟು ಹೆಚ್ಚಾಗಿದೆ. ಮುಂಗಾರು ಮಳೆ-2 ಚಿತ್ರ ಸೆನ್ಸಾರ್ ಮಂಡಳಿಯ ಮೆಚ್ಚುಗೆ ಪಡೆಯುವಲ್ಲಿ ಕೂಡ ಯಶಸ್ವಿಯಾಗಿದೆ. ಇತ್ತೀಚೆಗೆ ಮುಂಗಾರು ಮಳೆ-2 ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರದ ಯಾವುದೇ ದೃಶ್ಯಕ್ಕೂ ಕತ್ತರಿ ಪ್ರಯೋಗ ಮಾಡದೆ, ಯು ಸರ್ಟಿಫಿಕೇಟ್ ನೀಡಿದೆ.

ಮೊನ್ನೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಹಾಗೂ ಕರ್ಟನ್ ರೈಸರ್ ಸಮಾರಂಭ ನಡೆಯಿತು. ಮುಂಗಾರುಮಳೆ ಚಿತ್ರದ ಕಥೆ ಈಗಾಗಲೇ ಬಿಡುಗಡೆಯಾಗಿ ಜನಪ್ರಿಯವಾಗಿತ್ತು. ಅದೇ ರೀತಿ ಮುಂಗಾರುಮಳೆ-2 ಚಿತ್ರದ ಸ್ಟೋರಿ ಬುಕ್ ಕೂಡ ಈಗಾಗಲೇ ರೆಡಿಯಾಗುತ್ತಿದೆ. ಸಿನಿಮಾ ರಿಲೀಸಾದ ಒಂದೆರಡು ವಾರಗಳಲ್ಲಿ ಅದು ಓದುಗರ ಕೈಸೇರಲಿದೆ. ಈ ಪುಸ್ತಕವನ್ನು ಪತ್ರಕರ್ತ ಜೋಷಿರವರು ಸಿದ್ದಪಡಿಸಿದ್ದಾರೆ. ಅದರ ರಕ್ಷಾಪುಟದ ಅನಾವರಣ ಕೂಡ ಮೊನ್ನೆ ನಡೆಯಿತು. ನಿರ್ಮಾಪಕರಾದ ಜಿ.ಗಂಗಾಧರ್, ಶ್ರೀಮತಿ ಶಿಲ್ಪಾಗಣೇಶ್, ಗಣೇಶ್, ನಿರ್ದೇಶಕ ಶಶಾಂಕ್ ಸೇರಿದಂತೆ ಚಿತ್ರತಂಡದ ಬಹುತೇಕ ಪ್ರಮುಖರು ಅಲ್ಲಿ ಹಾಜರಿದ್ದರು.

ಈ ಚಿತ್ರವು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸೌತ್ ಈಸ್ಟ್ ಏಷ್ಯಾ, ಯು.ಕೆ, ಯುರೋಪ್, ಫ್ರಾನ್ಸ್, ಹೋಲೆಂಡ್, ಜರ್ಮನಿ, ಐರ್ಲಾಂಡ್, ಸ್ವೀಡನ್, ಡೆನ್ಮಾರ್ಕ್, ಕೆನಡಾ, ಯು.ಎಸ್.ಎ, ಇಟಲಿ, ಆಫ್ರಿಕಾ, ಬೆಲ್ಜಿಯಂ, ಸೇರಿದಂತೆ ಹಲವು ದೇಶಗಳ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇದೇ ವಾರ ರಿಲೀಸ್ ಆಗಲಿದೆ. ಇನ್ನು ಕರ್ನಾಟಕದಲ್ಲಿ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮುಂಗಾರು ಮಳೆ ಸುರಿಯಲಿದೆ ಎಂದು ಅಂದಾಜಿಸಲಾಗಿದೆ. ಚಿತ್ರ ಬಿಡುಗಡೆಯಾಗುವ ಬಹುತೇಕ ಥಿಯೇಟರ್‍ಗಳಲ್ಲಿ ಈಗಾಗಲೇ ಸಿನಿಮಾದ ಮುಂಗಡ ಟಿಕೇಟ್ ಬುಕ್ಕಿಂಗ್ ಕಾರ್ಯ ಕೂಡ ಆರಂಭವಾಗಿದೆ.

ಸೆವೆನ್ ಹಿಲ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ವಿದೇಶಗಳಲ್ಲಿ ಮುಂಗಾರು ಮಳೆ-2 ಬಿಡುಗಡೆಯ ಹೊಣೆ ಹೊತ್ತುಕೊಂಡಿದೆ ಎನ್ನಲಾಗುತ್ತಿದೆ. ಮುಂಗಾರು ಮಳೆ ಬಿಡುಗಡೆಯಾಗಿ ದಶಕದ ಬಳಿಕ ಅದೇ ಬ್ಯಾನರ್ ಮತ್ತು ಅದೇ ಹೆಸರಿನಲ್ಲಿ ತೆರೆಗೆ ಬರುತ್ತಿರುವ ಮುಂಗಾರು ಮಳೆ-2 ಚಿತ್ರದಲ್ಲಿ ಗಣೇಶ್ ಮತ್ತು ರವಿಚಂದ್ರನ್ ಮೊದಲ ಬಾರಿಗೆ ತೆರೆಮೇಲೆ ಒಂದಾಗಿ ಕಾಣಿಸಿಕೊಂಡಿದ್ದಾರೆ. ಮಂಗಳೂರು ಬೆಡಗಿ ನೇಹಾ ಶೆಟ್ಟಿ , ಶಿಲ್ವಾಮಂಜುನಾಥ್ ಮಖ್ಯಪಾತ್ರದಲ್ಲಿ ನಟಿಸಿದ್ದಾರೆ. ಒಟ್ಟಾರೆ ಎಲ್ಲೆಡೆ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಮೂಡಿಸಿರುವ ಮುಂಗಾರು ಮಳೆ-2 ಚಿತ್ರಕ್ಕೆ ಅಧಿಕೃತವಾಗಿ ಕೌಂಟ್ ಡೌನ್ ಆರಂಭವಾಗಿದೆ. ಅರ್ಜುನ್ ಜನ್ಯ ಸಗೀಂತ, ಶೇಕರ್ ಚಂದ್ರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.

 

► Follow us on –  Facebook / Twitter  / Google+

Facebook Comments

Sri Raghav

Admin