ಶರತ್ ಶವಯಾತ್ರೆ ವೇಳೆ ಕಲ್ಲುತೂರಾಟ, ಲಾಠಿ ಚಾರ್ಜ್, ಪರಿಸ್ಥಿತಿ ಉದ್ವಿಗ್ನ

ಈ ಸುದ್ದಿಯನ್ನು ಶೇರ್ ಮಾಡಿ

Mangaluru--01

ಬೆಂಗಳೂರು, ಜು.8- ನಾಲ್ಕು ದಿನಗಳ ಹಿಂದೆ ತೀವ್ರ ಹಲ್ಲೆಗೆ ಒಳಗಾಗಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ್ ನಿನ್ನೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅಕ್ಷರಶಃ ಅಗ್ನಿಕುಂಡವಾಗಿದೆ.   ಮಂಗಳೂರು ಎಜೆ ಆಸ್ಪತ್ರೆಯಿಂದ ಶರತ್ ಹುಟ್ಟೂರಾದ ಸಜಿಪ ಸಮೀಪದ ಕೆಂದೂರಿಗೆ ಮೆರವಣಿಗೆಯಲ್ಲಿ ಇಂದು ಪಾರ್ಥಿವ ಶರೀರ ಕೊಂಡೊಯ್ಯುವ ಸಂದರ್ಭದಲ್ಲಿ ಬಂಟ್ವಾಳದ ಕೈಕಂಬ ಬಳಿ ಕೆಲವು ದುಷ್ಕರ್ಮಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದರು.  ವಾಹನಗಳ ಮೇಲೆ ಕಲ್ಲು ತೂರಿದ ಪರಿಣಾಮ ಒಂದು ಬಸ್ ಹಾಗೂ ಮೂರು ಕಾರುಗಳ ಗಾಜುಗಳು ಪುಡಿಪುಡಿಯಾದವು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಈ ಘಟನೆಯಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಅವನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಕಲ್ಲು ತೂರಾಟದಲ್ಲಿ ತೊಡಗಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನಾದ್ಯಂತ ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಸ್ ಸಂಚಾರ ವಿರಳವಾಗಿತ್ತು. ಬಹುತೇಕ ಜನರು ಮನೆಯಿಂದ ಹೊರಬಂದಿರಲಿಲ್ಲ.  ಮಳೆ ನಡುವೆಯೂ ಆರ್‍ಎಸ್‍ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಶರತ್ ಮಡಿವಾಳನ ಶವಯಾತ್ರೆಯಲ್ಲಿ ಪಾಲ್ಗೊಂಡರು. ಮಂಗಳೂರಿನಿಂದ ಶರತ್ ಮನೆಯಿರುವ ಬಂಟ್ವಾಳದ ಕೆಂದೂರು ಗ್ರಾಮದವರೆಗೂ ಅಂತಿಮ ಯಾತ್ರೆ ನಡೆಯಿತು.

 

Mangaluru--02

ಭಾರೀ ಬಂದೋಬಸ್ತ್:

ಬಂಟ್ವಾಳ ತಾಲೂಕಿನ ಕಲ್ಲಡ್ಕ, ಬಿಸಿ ರೋಡ್‍ನಲ್ಲಿ ಸಿಆರ್‍ಪಿಎಫ್ ಸೂಕ್ಷ್ಮ ಪ್ರದೇಶಗಳಲ್ಲಿ ಆರ್‍ಎಎಫ್ ಪಡೆ ನಿಯೋಜನೆ, 4 ಕೆಎಸ್‍ಆರ್‍ಪಿ, 2 ಸಿಆರ್‍ಪಿಎಫ್, 2 ಆರ್‍ಎಎಫ್ ತಂಡಗಳು ಸೇರಿದಂತೆ 2 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಉಡುಪಿ, ಚಿಕ್ಕಮಗಳೂರಿನಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿತ್ತು.  ಬಿಜೆಪಿ ಮುಖಂಡರು, ಆರ್‍ಎಸ್‍ಎಸ್, ವಿಎಚ್‍ಪಿ, ಭಜರಂಗದಳ, ಹಿಂದೂಪರ ಸಂಘಟನೆಯವರು ಶವಯಾತ್ರೆ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ಶಾಂತಿ-ಸುವ್ಯವಸ್ಥೆಗೆ ಭಂಗವಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಕಳೆದ ಒಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆ ಪದೇ ಪದೇ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಕೋಮುಸೂಕ್ಷ್ಮ ಪ್ರದೇಶವಾಗಿರುವ ಈ ಜಿಲ್ಲೆಯಲ್ಲಿ ಹಿಂದೂಗಳ ಮೇಲಿನ ಹಲ್ಲೆ ಖಂಡಿಸಿ ನಿನ್ನೆ ಬಿಸಿ ರೋಡ್‍ನಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಸಂಸದರು, ಶಾಸಕರು ಹಾಗೂ ಹಿಂದೂ ಸಮಾಜ ಮುಖಂಡ ಕಲ್ಲಡ್ಕ ಪ್ರಭಾಕರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈ ಬೆನ್ನಲ್ಲೆ ಕಳೆದ ನಾಲ್ಕು ದಿನಗಳ ಹಿಂದೆ ಹಲ್ಲೆಗೊಳಗಾಗಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಶರತ್ ಸಾವಿನ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಹಿಂದೂಪರ ಸಂಘಟನೆಗಳವರು ಅಪಾರ ಸಂಖ್ಯೆಯಲ್ಲಿ ಮಂಗಳೂರಿನ ಎಜೆ ಆಸ್ಪತ್ರೆ ಮುಂದೆ ಜಮಾಯಿಸಿದ್ದರು.
ಮರಣೋತ್ತರ ಪರೀಕ್ಷೆ ನಂತರ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ ನಂತರ ಸಂಘ ಪರಿವಾರದವರು ಹಾಗೂ ಬಿಜೆಪಿಯವರು ಮೆರವಣಿಗೆಯಲ್ಲಿ ಸಜಪದಿಂದ ಕೆಂದೂರಿಗೆ ಕೊಂಡೊಯ್ದರು. ದಾರಿಯುದ್ದಕ್ಕೂ ಬಿಗುವಿನ ವಾತಾವರಣವಿತ್ತು.

ಭಾರೀ ಪ್ರತಿಭಟನೆ:

ಉದಯ ಲ್ಯಾಂಡ್ರಿ ಮಾಲೀಕ ಶರತ್ ಮಡಿವಾಳ ಅವರ ಮೇಲೆ ಅಪರಿಚಿತರು ನಡೆಸಿದ ಮಾರಣಾಂತಿಕ ಹಲ್ಲೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ಬಿಸಿ ರೋಡ್ ಬಸ್ ನಿಲ್ದಾಣದಲ್ಲಿ ನಿಷೇಧಾಜ್ಞೆ ನಡುವೆಯೂ ಭಾರೀ ಪ್ರತಿಭಟನೆ ನಡೆಸಿತ್ತು. ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‍ಕುಮಾರ್ ಕಟಿಲ್, ಶಾಸಕರಾದ ಸುನಿಲ್‍ಕುಮಾರ್, ಗಣೇಶ್ ಕಾರ್ನಿಕ್ ಸೇರಿದಂತೆ ನಿನ್ನೆ ಹಲವರನ್ನು ವಶಕ್ಕೆ ಪಡೆದು ಪೊಲೀಸರು ಬಿಡುಗಡೆ ಮಾಡಿದ್ದರು. ಈ ಸಂದರ್ಭದಲ್ಲಿ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪ್ರತಿಭಟನಾ ನಿರತರು ಅವರನ್ನು ಮೇಲಕ್ಕೆತ್ತಿ ಸಂಭ್ರಮಿಸಿದರು. ಅವರನ್ನೂ ಬಂಧಿಸಲು ಪೊಲೀಸರು ಮುಂದಾದಾಗ ಅವರ ಬೆಂಬಲಿಗರು ಅಡ್ಡಿಪಡಿಸಿದರು.

ನಿಷೇಧಾಜ್ಞೆ ನಡುವೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ 20 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಕ್ಷಿಣ ಕನ್ನಡದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ. ನಿಷೇಧಾಜ್ಞೆ ನಡುವೆ ನಿನ್ನೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ, ನಳೀನ್‍ಕುಮಾರ್ ಕಟೀಲ್ ವಿರುದ್ದ ಎಫ್‍ಆರ್‍ಐ ದಾಖಲಿಸಲಾಗಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin