ಶಾಕಿಂಗ್ : ಕಾವೇರಿ ನೀರು ಕುಡಿಯಲು ಯೋಗ್ಯವಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Cauvery-Water

ಬೆಂಗಳೂರು, ಜು.22- ಕನ್ನಡ ನಾಡಿನ ಜೀವನದಿ ಎಂದೇ ಜನಜನಿತವಾಗಿರುವ ಕಾವೇರಿ ನದಿ ನೀರು ಕುಡಿಯಲು ಅಷ್ಟು ಯೋಗ್ಯವಲ್ಲ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಮೈಸೂರು ವಿಶ್ವವಿದ್ಯಾನಿಲಯ ನಡೆಸಿರುವ ಸಂಶೋಧನೆ ಪ್ರಕಾರ ಕಾವೇರಿ ನದಿ ನೀರು ಹರಿಯುವ ಸುತ್ತಮುತ್ತ ಗಣಿಗಾರಿಕೆ ಹಾಗೂ ಜೀವನದಿಯ ಉಗಮ ಸ್ಥಳವಾದ ಕೊಡಗಿನಲ್ಲಿ ಯಥೇಚ್ಚವಾಗಿ ನಡೆಯುವ ಕಾಫಿ ಸಂಸ್ಕರಣೆಯಿಂದ ರಾಸಾಯನಿಕ ಮಿಶ್ರಣಗೊಂಡು ನೀರು ಕಲುಷಿತವಾಗಿದೆ ಎಂಬುದು ಸಾಬೀತಾಗಿದೆ.

ರಾಸಾಯನಿಕ ಮಿಶ್ರಿತ ನೀರನ್ನು ಶುದ್ಧೀಕರಿಸದೆ ನೇರವಾಗಿ ಬಳಕೆ ಮಾಡಿದರೆ ಮನುಷ್ಯನ ಆರೋಗ್ಯದ ಮೇಲೆ ನೇರ ದುಷ್ಪರಿಣಾಮ ಬೀರುತ್ತದೆ. ಅಂದರೆ ನರಗಳು ಸಹಜವಾಗಿ ದೌರ್ಬಲ್ಯಕ್ಕೆ ಒಳಗಾಗುತ್ತವೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
ಕಾವೇರಿ ನೀರು ಅತಿ ಹೆಚ್ಚು ಹರಿಯುವ ಜಿಲ್ಲೆಯಲ್ಲಿ ಸಂಸದರೊಬ್ಬರಿಗೆ ಸೇರಿದ ಗಣಿಗಾರಿಕೆಯಿಂದ ನೀರು ಕಲುಷಿತವಾಗುತ್ತಿದೆ. ಈಗಾಗಲೇ ಈ ಕಂಪೆನಿ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಭಾರೀ ಪ್ರಮಾಣದ ದಂಡ ವಿಧಿಸಿ ಅಕ್ರಮ ಗಣಿಗಾರಿಕೆ ನಡೆಸದಂತೆ ನಿರ್ದೇಶನ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.
ಗಣಿಗಾರಿಕೆಯಿಂದ ಹೊರ ಬರುವ ತ್ಯಾಜ್ಯವಸ್ತುಗಳು ಕಾವೇರಿ ನದಿಗೆ ಸೇರ್ಪಡೆಯಾಗುತ್ತಿದೆ. ಅಲ್ಲದೆ, ಈ ನದಿ ಪಾತ್ರದಲ್ಲಿ ಅನೇಕ ಕಡೆ ಕಸ, ಸುಟ್ಟ ಹೆಣದ ಬೂದಿಯನ್ನು ಹಾಕುವುದು. ಕ್ರಿಮಿನಾಶಕಗಳನ್ನು ಎಸೆಯುವುದು ಸೇರಿದಂತೆ ನಾನಾ ರೀತಿಯ ಕಲುಷಿತ ವಸ್ತುಗಳನ್ನು ಹಾಕುವುದರಿಂದ ನೀರು ಕುಡಿಯಲು ಯೋಗ್ಯವಲ್ಲ ಎಂದು ಉಲ್ಲೇಖಿಸಲಾಗಿದೆ. ಸಾರ್ವಜನಿಕರು ಶುದ್ಧೀಕರಿಸದೆ ನೀರನ್ನು ಯಾವುದೇ ಕಾರಣಕ್ಕೂ ಕುಡಿಯಬಾರದು. ಕಲುಷಿತ ನೀರು ಬಳಕೆ ಮನುಷ್ಯನ ಜೀವವನ್ನೇ ಬಲಿ ಪಡೆದರೂ ಅಚ್ಚರಿ ಇಲ್ಲ ಎಂದು ಹೇಳಲಾಗಿದೆ.

ಇನ್ನು ಕಾವೇರಿ ನದಿಯ ಉಗಮ ಸ್ಥಾನ ಕೊಡಗಿನಲ್ಲಿ ಕಾಫಿ ಸಂಸ್ಕರಣೆ ತ್ಯಾಜ್ಯ ನೀರು ಕಲುಷಿತಗೊಳ್ಳುತ್ತಿದೆ. ಈ ಭಾಗದಲ್ಲಿ ಯಥೇಚ್ಛವಾಗಿ ಕಾಫೆ ಬೆಳೆಯುತ್ತಿರುವುದರಿಂದ ಸಂಸ್ಕರಿಸುವ ವೇಳೆ ನೀರಿನಲ್ಲಿ ಕೆಲ ರಾಸಾಯನಿಕ ವಸ್ತುಗಳು ಸೇರ್ಪಡೆಯಾಗುತ್ತಿರುವುದೇ ನೀರು ಕಲುಷಿತವಾಗಲು ಕಾರಣ ಎಂದು ತಿಳಿದು ಬಂದಿದೆ. ಸರ್ಕಾರ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದ್ದು, ನೀರನ್ನು ಬಳಕೆ ಮಾಡುವ ಮುನ್ನ ಶುದ್ಧೀಕರಿಸುವುದು ಸೂಕ್ತ ಎಂದು ಜಲ ತಜ್ಞರೊಬ್ಬರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin