ಶಾಕಿಂಗ್ : ಚುನಾವಣಾಧಿಕಾರಿಗಳನ್ನು ಬೆಚ್ಚಿ ಬೀಳಿಸಿದ ನಕಲಿ ವೋಟರ್ಸ್ ಜಾಲ..!

ಈ ಸುದ್ದಿಯನ್ನು ಶೇರ್ ಮಾಡಿ

Fake-Voter-sd

ಬೆಂಗಳೂರು, ಏ.26- ಚುನಾವಣಾಧಿಕಾರಿಗಳ ಯೂಸರ್ ಐಡಿ ಮತ್ತು ಪಾಸ್‍ವರ್ಡ್ ಅನ್ನು ಅನಧಿಕೃತವಾಗಿ ಬಳಸಿಕೊಂಡು ನಕಲಿ ಮತದಾರರನ್ನು ಸೃಷ್ಟಿಸುತ್ತಿದ್ದ ಖದೀಮರ ಜಾಲವೊಂದನ್ನು ಉತ್ತರ ವಿಭಾಗದ ಪೊಲೀಸರು ಭೇದಿಸಿ ಐದು ಮಂದಿಯನ್ನು ಬಂಧಿಸಿದ್ದಾರೆ. ನೆಲಮಂಗಲದ ನವೀನ್‍ಕುಮಾರ್ (30), ಚಿಕ್ಕನಾಯಕನಪಾಳ್ಯದ ಸಚಿನ್ (26), ದೊಡ್ಡ ಬಿದರಕಲ್ಲು ನಿವಾಸಿ ದೇವರಾಜ್ (25), ನಾಗಸಂದ್ರ ನಿವಾಸಿ ಸಂಜಯ್‍ಕುಮಾರ್ ಶೀಲವಂತ (29) ಹಾಗೂ ಮಲ್ಲಸಂದ್ರ ನಿವಾಸಿ ಕರಿಸಿದ್ದೇಶ್ವರ (34) ಬಂಧಿತರು.

ಆರೋಪಿಗಳು ದಾಸರಹಳ್ಳಿ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಸಹಾಯಕ ಕಂದಾಯಾಧಿಕಾರಿಗಳು ಬಳಸುವ ಇಆರ್‍ಎಂಎಸ್ ವೆಬ್‍ಸೈಟ್‍ನ ಯೂಸರ್ ಐಡಿ, ಪಾಸ್‍ವರ್ಡ್ ಮತ್ತು ಡಿಜಿಟಲ್ ಕೀಗಳನ್ನು ಅನಧಿಕೃತವಾಗಿ ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಹಣ ಪಡೆದು ನಕಲಿ ಗುರುತಿನ ಚೀಟಿಗಳನ್ನು ಸೃಷ್ಟಿಸಿಕೊಡುತ್ತಿದ್ದರು. ಬಂಧಿತರಿಂದ ಅನಧಿಕೃತವಾಗಿ ಗುರುತಿನ ಚೀಟಿ ತಯಾರು ಮಾಡಲು ಉಪಯೋಗಿಸುತ್ತಿದ್ದ ಕಂಪ್ಯೂಟರ್ ಸಿಸ್ಟಂಗಳು, ಪೆನ್ ಡ್ರೈವ್, ಚುನಾವಣಾ ಗುರುತಿನ ಚೀಟಿ ಪಡೆಯಲು ಸಲ್ಲಿಸುವ ನಮೂನೆ-6ರ ಅರ್ಜಿಗಳು, ನಕಲಿ ವೋಟರ್ ಐಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಏನಿದು ಪ್ರಕರಣ:
ದಾಸರಹಳ್ಳಿ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಮೂನೆ-6ರ ಅರ್ಜಿಗಳನ್ನು ಸ್ವೀಕರಿಸದಿದ್ದರೂ ಯಾರೋ ಅನಾಮಿಕ ವ್ಯಕ್ತಿಗಳು ಅನಧಿಕೃತವಾಗಿ ಅಂತರ್ಜಾಲದ ಮೂಲಕ ಮತದಾರರ ಪಟ್ಟಿಗೆ ನಕಲಿ ಮತದಾರರನ್ನು ಸೇರ್ಪಡೆ ಮಾಡುತ್ತಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿಗಳಾದ ನಾಗರತ್ನ ಮತ್ತು ಅನಂತರಾಮಯ್ಯ ಅವರುಗಳು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ರಾಟೋಡ್ ಅವರು ಆರೋಪಿಗಳ ಪತ್ತೆಗಾಗಿ ಸಿಸಿಬಿ ಮತ್ತು ಪೀಣ್ಯ ಠಾಣಾ ಪೊಲೀಸ್ ಅಧಿಕಾರಿಗಳ ವಿಶೇಷ ತಂಡವೊಂದನ್ನು ರಚನೆ ಮಾಡಿದ್ದರು. ಕಾರ್ಯಾಚರಣೆಗಿಳಿದ ವಿಶೇಷ ತಂಡದ ಪೊಲೀಸರು ಅನಧಿಕೃತವಾಗಿ ಚುನಾವಣಾ ಗುರುತಿನ ಚೀಟಿಗಳನ್ನು ಸೃಷ್ಟಿಸುತ್ತಿದ್ದ ಐದು ಮಂದಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು , ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು , ತನಿಖೆ ಮುಂದುವರೆದಿದೆ.

ಡಿಸಿ ದೂರು:
ಚುನಾವಣೆ ಗುರುತಿನ ಚೀಟಿ ಪಡೆಯಲು ಸಲ್ಲಿಸಬೇಕಾದ ನಮೂನೆ-6 ಅನ್ನು ಸಲ್ಲಿಸದಿದ್ದರೂ ಕೆಲವು ಅನಾಮಧೇಯ ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಮತದಾರರ ಪಟ್ಟಿಗೆ ಅಕ್ರಮವಾಗಿ ನಕಲಿ ಮತದಾರರು ಸೇರ್ಪಡೆಗೊಳ್ಳುತ್ತಿದ್ದು ಈ ಕುರಿತಂತೆ ಸೂಕ್ತ ತನಿಖೆ ನಡೆಸಿ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಬೇಕು. ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದರು.

ಎಚ್ಚರ ಅಗತ್ಯ:
ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಆಯೋಗ ಏನೇ ಎಚ್ಚರಿಕೆ ವಹಿಸುತ್ತಿದ್ದರೂ ಕೆಲವು ಕಿಡಿಗೇಡಿಗಳು ಅಂತರ್ಜಾಲದ ನೆರವು ಪಡೆದು ಅಧಿಕಾರಿಗಳ ಗಮನಕ್ಕೆ ಬಾರದೆ ಮತದಾರರ ಪಟ್ಟಿಗೆ ನಕಲಿ ಮತದಾರರನ್ನು ಸೇರ್ಪಡೆ ಮಾಡುತ್ತಿರುವುದು ಆತಂಕ ಸೃಷ್ಟಿಸುತ್ತಿರುವುದರಿಂದ ಆಯೋಗ ಎಚ್ಚರಿಕೆ ವಹಿಸುವ ಅಗತ್ಯವಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin