ಶಾಲಾ-ಕಾಲೇಜುಗಳ ವೇತನಾನುದಾನ ಬಿಡುಗಡೆ ಕುರಿತು 15-20 ದಿನದೊಳಗೆ ಸೂಕ್ತ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

Tanveer-Sait

ಬೆಳಗಾವಿ,ನ.17- ಅನುದಾನದ ವ್ಯಾಪ್ತಿಗೆ ಒಳಪಡುವ ಶಾಲಾ-ಕಾಲೇಜುಗಳ ವೇತನಾನುದಾನ ಬಿಡುಗಡೆ ಮಾಡುವ ಸಂಬಂಧ 15-20 ದಿನದೊಳಗೆ ವರದಿ ತರಿಸಿಕೊಂಡು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ವಿಧಾನಪರಿಷತ್‍ಗೆ ತಿಳಿಸಿದರು. ಸದಸ್ಯ ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಕಿ ಇರುವ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಿದ್ದೇನೆ. ಈಗಾಗಲೇ ಈ ವಿಷಯ ಸಚಿವ ಸಂಪುಟ ಉಪಸಮಿತಿ ಮುಂದೆ ಇರುವುದರಿಂದ ಆದಷ್ಟು ಬೇಗ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ 1995ಕ್ಕೂ ಮೊದಲು 319 ಪ್ರಾಥಮಿಕ , 210 ಪ್ರೌಢ, 108 ಪದವಿ ಕಾಲೇಜು ಸೇರಿದಂತೆ ಒಟ್ಟು 632 ಶಿಕ್ಷಣ ಸಂಸ್ಥೆಗಳು ವೇತನಾನುದಾನಕ್ಕೆ ಒಳಪಟ್ಟಿಲ್ಲ ನಮ್ಮ ಸರ್ಕಾರ 2007ರ ಕಾಯ್ದೆ ಹಾಗೂ 2013ರ ತಿದ್ದುಪಡಿಯಂತೆ ಕೆಲವು ಕ್ರಮಗಳನ್ನು ಮಾತ್ರ ಕೈಗೊಂಡಿದೆ. ನೇಮಕಾತಿ ಪ್ರಕ್ರಿಯೆಗೆ ವಿರುದ್ಧವಾಗಿ ನೇಮಕಗೊಂಡ ಶಾಲಾಕಾಲೇಜು ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಕ್ಕೆ ಹೊಂದಿಲ್ಲದ ಶಾಲಾಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಅವಕಾಶವಿಲ್ಲ ಎಂದು ತನ್ವೀರ್ ಸೇಟ್ ಸ್ಪಷ್ಟಪಡಿಸಿದರು.

ಇದಕ್ಕೆ ಜೆಡಿಎಸ್‍ನ ಬಸವರಾಜ ಹೊರಟ್ಟಿ , ಪುಟ್ಟಣ್ಣ ಮತ್ತಿತರ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.  ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವವರು ಇಂದು ಬೀದಿಗೆ ಬೀಳುವ ಪರಿಸ್ಥಿತಿ ಉದ್ಭವವಾಗಿದೆ. ಸಿಬ್ಬಂದಿಗೆ ಸಂಬಳವಿಲ್ಲದೆ ಅವರ ಕುಟುಂಬಕೂಡ ಬೀದಿ ಪಾಲಾಗುವಂತಾಗಿದೆ. ಸರ್ಕಾರ ಮಾನವೀಯ ದೃಷ್ಟಿಯಿಂದ ಏಕೆ ವೇತನಾನುದಾನ ನೀಡಬಾರದು ಎಂದು ಪ್ರಶ್ನಿಸಿದರು.

ಪುಟ್ಟಣ್ಣ ಮಾತನಾಡಿ, ಸರ್ಕಾರದ ಕೆಲ ತಪ್ಪು ತೀರ್ಮಾನಗಳಿಂದಾಗಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿರುವವರು ವೇತನಾನುದಾನ ಇಲ್ಲದೆ ಪರದಾಡುತ್ತಿದ್ದಾರೆ. ಇವರಿಗೆ ಅನುದಾನ ನೀಡಲು ನಿಮಗೆ ನಿಯಮಗಳು ಅಡ್ಡಬರುತ್ತದೆ. ಬೇರೆಯವರಿಗೆ ನೀಡಲು ನಿಯಮ ಅನ್ವಯವಾಗುವುದಿಲ್ಲವೆ ಎಂದು ಪ್ರಶ್ನಿಸಿದರು.
ಇದೊಂದು ಗಂಭೀರ ವಿಷಯವಾಗಿರುವುದರಿಂದ ಚರ್ಚೆಗೆ ಅವಕಾಶ ನೀಡುತ್ತೇವೆ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು.

Facebook Comments

Sri Raghav

Admin