ಶಾಶ್ವತ ಸಿಂಧೂ ಆಯೋಗದ ಸಭೆಯಲ್ಲಿ ಭಾರತ-ಪಾಕ್ ಮಹತ್ವದ ಚರ್ಚೆ
ಇಸ್ಲಾಮಾಬಾದ್, ಮಾ.20-ಸಿಂಧೂ ನದಿ ನೀರಿನ ಒಪ್ಪಂದ ಕುರಿತು ದ್ವಿಪಕ್ಷೀಯ ಮಾತುಕತೆ ಮೂಲಕ ಭಾರತ-ಪಾಕಿಸ್ತಾನ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ದೇಶಗಳ ಅಧಿಕಾರಿಗಳು ಶಾಶ್ವತ ಸಿಂಧೂ ಆಯೋಗದ ಸಭೆಯಲ್ಲಿ (ಪಿಐಸಿ) ಮಹತ್ವದ ಮಾತುಕತೆ ನಡೆಸಿದರು.
ಇಂದಿನಿಂದ ಆರಂಭವಾಗಿರುವ ಸಭೆಯಲ್ಲಿ ಭಾಗವಹಿಸಲು ಭಾರತದ 10 ಅಧಿಕಾರಿಗಳ ನಿಯೋಗ ನಿನ್ನೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ಗೆ ತೆರಳಿದ್ದರು.
ಭಾರತದ ಸಿಂಧೂ ನದಿ ಆಯೋಗದ ಆಯುಕ್ತ ಪಿ.ಕೆ.ಸಕ್ಸೇನಾ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹಾಗೂ ಜಲ ತಜ್ಞರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಪಾಕಿಸ್ತಾನದ ಸಿಂಧೂ ನದಿ ಆಯೋಗದ ಆಯುಕ್ತ ಮಿಜರ್ ಆಸಿಫ್ ಸಯೀದ್ ನೇತೃತ್ವದಲ್ಲಿ ಜಲ ಮತ್ತು ವಿದ್ಯುತ ಸಚಿವಾಲಯದ ಅಧಿಕಾರಿಗಳು ಚರ್ಚೆಯಲ್ಲಿ ತೊಡಗಿದರು. ಭಾರತದ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂಥ ಯಾವುದೇ ಒಪ್ಪಂದಕ್ಕೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಉರಿ ಸೇನಾ ನೆಲೆ ಮೇಲೆ ಪಾಕಿಸ್ತಾನ ಉಗ್ರರು ದಾಳಿ ನಡೆಸಿದ ನಂತರ ಸಿಂಧೂ ಆಯೋಗದ ಸಭೆ ಸ್ಥಗಿತಗೊಂಡಿತ್ತು. 6 ತಿಂಗಳ ನಂತರ ಮತ್ತೆ ಸಭೆ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಿರ್ಮಾಣವಾಗುತ್ತಿರುವ 240 ಮೆಗಾವ್ಯಾಟ್ ಸಾಮಥ್ರ್ಯದ ಉರಿ 2 ಮತ್ತು ಕಾರ್ಗಿಲ್ನಲ್ಲಿ ನಿರ್ಮಾಣವಾಗುತ್ತಿರುವ 44 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯದ ಚುತಕ್ ಯೋಜನೆಗಳ ಬಗ್ಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸುತ್ತಿರುವ ಕೃಷ್ಣಗಂಗಾ ಮತ್ತು ರಾಟ್ಲೆ ಯೋಜನೆಗಳಿಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದ ಪಾಕಿಸ್ಥಾನ ವಿಶ್ವಬ್ಯಾಂಕ್ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಕು ಎಂದು ಈ ಹಿಂದೆ ಆಗ್ರಹಿಸಿತ್ತು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS