ಶಾಸಕರಿಗೂ ತಪ್ಪದ ಟೋಲ್ ಕಿರುಕುಳ, ಸರ್ಕಾರಕ್ಕೆ ವಿಪಕ್ಷ ಸದಸ್ಯರ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Parishat--01

ಬೆಂಗಳೂರು, ಫೆ.7- ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಶಾಸಕರಿಗೆ ಅನಗತ್ಯವಾಗಿ ತೊಂದರೆ ಕೊಡಲಾಗುತ್ತಿದೆ. ವಿಐಪಿ ವಾಹನಗಳಿಗೆ ಪ್ರತ್ಯೇಕ ದ್ವಾರ ನಿರ್ಮಿಸಿಲ್ಲ ಎಂದು ಆರೋಪಿಸಿ ವಿಧಾನ ಪರಿಷತ್‍ನಲ್ಲಿಂದು ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.   ಒಂದು ಹಂತದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಉತ್ತರದಿಂದ ತೃಪ್ತರಾಗದ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿಯನ್ನೂ ನಡೆಸಿದರು.  ಸದಸ್ಯ ಆರ್.ಚೌಡರೆಡ್ಡಿ ತೂಪಲ್ಲಿ ಮತ್ತು ಎಂ.ಎ. ಗೋಪಾಲಸ್ವಾಮಿ ಅವರು ವಿಷಯ ಪ್ರಸ್ತಾಪಿಸಿ, ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಶಾಸಕರಿಗೆ ಅನಗತ್ಯ ಕಿರುಕುಳ ನೀಡಿ ಅಗೌರವ ತೋರಲಾಗುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಕೂಡ ಟೋಲ್‍ಗೇಟ್‍ನಲ್ಲಿ ತಡೆದು ನಿಲ್ಲಿಸಲಾಗಿದೆ. ಸದಸ್ಯರ ಗುರುತಿನ ಚೀಟಿ ನಕಲಿ ಎಂದು ಟೋಲ್ ಸಿಬ್ಬಂದಿ ನಮ್ಮನ್ನು ಅನುಮಾನದಿಂದ ನೋಡುತ್ತಿದ್ದಾರೆ. ಮಾತ್ರವಲ್ಲ ಆಂಬುಲೆನ್ಸ್ ಮತ್ತು ವಿಐಪಿ ವಾಹನಗಳಿಗೆ ಇರುವ ಪ್ರತ್ಯೇಕ ಮಾರ್ಗ ಒದಗಿಸಿಲ್ಲ ಎಂದು ಆರೋಪಿಸಿದರು. ಇವರ ಮಾತಿಗೆ ಜೆಡಿಎಸ್, ಬಿಜೆಪಿ ಸದಸ್ಯರು ಕೂಡ ಧ್ವನಿಗೂಡಿಸಿದರು.

ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮತ್ತು ಬಿಜೆಪಿ ಹಿರಿಯ ಸದಸ್ಯ ರಾಮಚಂದ್ರೇಗೌಡ ಅವರು, ಸಚಿವರ ವಿರುದ್ಧ ಹರಿಹಾಯ್ದು, ಪ್ರತಿ ಬಾರಿಯೂ ಸಚಿವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುತ್ತಾರೆ. ಆದರೆ ಸಮಸ್ಯೆ ಇನ್ನು ಮುಂದುವರಿದಿದೆ. ಇದು ಸಚಿವರ ವೈಫಲ್ಯವನ್ನು ತೋರಿಸುತ್ತದೆ. ಸದಸ್ಯರಿಗೆ ಅಗೌರವ ತೋರುವುದನ್ನು ಸಹಿಸಲು ಸಾಧ್ಯವಿಲ್ಲ. ಎಚ್.ಡಿ. ದೇವೇಗೌಡರಂತಹ ಹಿರಿಯರನ್ನು ಟೋಲ್‍ಗಳಲ್ಲಿ ನಿಲ್ಲಿಸಿರುವುದಕ್ಕೆ ನಿಮಗೆ ನಾಚಿಕೆಯಾಗುವುದಿಲ್ಲವೇ ? ಎಂದು ಪ್ರಶ್ನಿಸಿದರು.

ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಎಲ್ಲಾ ಸದಸ್ಯರು ಹಣ ಪಾವತಿಸಿಯೇ ಟೋಲ್ ಮೂಲಕ ಹೋಗುವಂತೆ ನಿಯಮ ತನ್ನಿ ಎಂದು ರಾಮಚಂದ್ರೇಗೌಡರು ಹೇಳಿದರು.
ಅಂತಿಮವಾಗಿ ಸಚಿವರು ಉತ್ತರ ನೀಡಿ, ಸದಸ್ಯರಿಗೆ ತೊಂದರೆಯಾಗಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಕೆಲವು ಟೋಲ್‍ಗಳಲ್ಲಿ ವಿಐಪಿ ವಾಹನಗಳಿಗೆ ಪ್ರತ್ಯೇಕ ದ್ವಾರ ನಿರ್ಮಿಸಿಲ್ಲ. ಎಲ್ಲಾ ಟೋಲ್‍ಗಳಲ್ಲಿ ಈ ಸಮಸ್ಯೆ ಇಲ್ಲ. ಆದರೂ ಈ ಸಮಸ್ಯೆಯ ಬಗ್ಗೆ ಚರ್ಚಿಸಲು ಇದೇ 13ರಂದು ಸಂಜೆ 5ಗಂಟೆಗೆ ವಿಧಾನಸೌಧದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಭರವಸೆ ನೀಡಿದರು.

ಆದರೂ ಧರಣಿಯನ್ನು ಮುಂದುವರಿಸಿದ ಜೆಡಿಎಸ್ ಸದಸ್ಯರನ್ನು ಮನವೊಲಿಸಿದ ಸಚಿವ ಡಿ.ಕೆ.ಶಿವಕುಮಾರ್, ಶಾಸಕರು ಗುರುತಿನ ಚೀಟಿ ತೋರಿಸುವಂತೆ ಮಾಡುವುದು ಸರಿಯಲ್ಲ. ಇದು ಅವರ ಗೌರವ, ಸ್ವಾಭಿಮಾನಕ್ಕೆ ಧಕ್ಕೆ ತರುವಂತಹದ್ದು. ಈ ಬಗ್ಗೆ ಸರ್ಕಾರದ ಗಮನ ಸೆಳೆದಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಸಮಸ್ಯೆ ರಾಜ್ಯ ಹೆದ್ದಾರಿಯಲ್ಲಾಗಿದ್ದರೆ ಒಂದು ನಿಮಿಷದಲ್ಲಿ ಸಮಸ್ಯೆ ಇತ್ಯರ್ಥಪಡಿಸುತ್ತಿದ್ದೆವು. ಆದರೆ ಇದು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗುತ್ತಿದ್ದು, ಇದು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಆದ್ದರಿಂದ ಸಚಿವರು 13ರಂದು ಕರೆದಿರುವ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಧರಣಿಯನ್ನು ಹಿಂಪಡೆಯಲಾಯಿತು.   ಶಾಸಕರ ಗುರುತಿನ ಚೀಟಿ ದುರುಪಯೋಗಪಡಿಸಿಕೊಳ್ಳದಂತೆ ಮಾಡಲು ಎಲ್ಲಾ ಸದಸ್ಯರಿಗೆ ಮಾಗ್ನಟಿಕ್ ಗುರುತಿನ ಚೀಟಿ ನೀಡಬೇಕು ಎಂದು ಸಲಹೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin