ಶಾಸಕರ ಸಮ್ಮುಖದಲ್ಲೇ ನಗರಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ಜಟಾಪಟಿ

ಈ ಸುದ್ದಿಯನ್ನು ಶೇರ್ ಮಾಡಿ

ct--ravi

ಚಿಕ್ಕಮಗಳೂರು,ಅ.27-ಶಾಸಕ ಸಿ.ಟಿ.ರವಿ ಅವರ ಎದುರಲ್ಲೇ ನಗರಸಭೆ ಸರ್ವಸದಸ್ಯರ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆದು ಕೈ ಕೈ ಮಿಲಾಯಿಸಿದ ಪ್ರಸಂಗ ನಡೆಯಿತು. ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಎಚ್.ಎಸ್.ಪುಟ್ಟಸ್ವಾಮಿ ಮಾತನಾಡಿ, ನಗರಸಭೆ ಆಡಳಿತ ಸಂಪೂರ್ಣ ದಿವಾಳಿಯಾಗಿದೆ. ಈ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಬೇಕೆಂದು ಶಾಸಕ ಸಿ.ಟಿ.ರವಿ ಅವರ ಕಡೆಗೆ ಕೈ ತೋರಿಸಿ ಮಾತನಾಡುತ್ತಿದ್ದಾಗ, ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು ಅಜೆಂಡಾ ಪ್ರಕಾರ ಸಭೆ ನಡೆಸಬೇಕೆಂದು ಒಕ್ಕೋರಲಿನಿಂದ ಕೂಗಿದರು.

ಪುಟ್ಟಸ್ವಾಮಿ ಅವರ ಬೆಂಬಲಕ್ಕೆ ಬಂದ ಕಾಂಗ್ರೆಸ್‍ನ ಮತ್ತೊಬ್ಬ ಸದಸ್ಯ ಸಂದೇಶ್, ನಗರಸಭೆಯ ಆಡಳಿತ ವೈಖರಿಯ ಬಗ್ಗೆ ಆರೋಪಗಳನ್ನು ಮಾಡಲು ಮುಂದಾದರು. ಇದರಿಂದ ಕುಪಿತಗೊಂಡ ಬಿಜೆಪಿ ಸದಸ್ಯ ರವಿಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಇವರಿಬ್ಬರ ನಡುವೆ ಮಾತಿಗೆಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಆರೋಪ, ಪ್ರತ್ಯಾರೋಪಗಳಿಂದ ಗದ್ದಲ ಏರ್ಪಟ್ಟಾಗ ಎರಡು ಗುಂಪಿನ ಸದಸ್ಯರ ನಡುವೆ ಎಳೆದಾಟ-ನೂಕಾಟ ಉಂಟಾಗಿ ಒಬ್ಬರ ಶರ್ಟ್‍ನ ಜೇಬು ಹರಿದು ಹೋಗಿತ್ತು.
ಇದನ್ನೆಲ್ಲ ಮೂಕ ಪ್ರೇಕ್ಷರಂತೆ ವೀಕ್ಷಿಸುತ್ತಿದ್ದ ಶಾಸಕ ಸಿ.ಟಿ.ರವಿ ಎಲ್ಲವನ್ನು ವೀಕ್ಷಿಸಿ ನಂತರ ಸಭಾಧ್ಯಕ್ಷರಿಗೆ ಅಜೆಂಡಾ ಪ್ರಕಾರ ಚರ್ಚೆಗೆ ಅವಕಾಶ ನೀಡಬೇಕೆಂದು ಕೇಳಿ ಬೆಂಬಲಕ್ಕೆ ತೆರೆ ಎಳೆದರು. ನಗರದ ಸ್ವಚ್ಛತೆ ಮಾಡಲು ನೂತನ ಜಿಲ್ಲಾಧಿಕಾರಿಗಳು ಶ್ರಮ ವಹಿಸುತ್ತಿದ್ದಾರೆ. ಇದಕ್ಕೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಶಭಾಷ್‍ಗಿರಿ ನೀಡಲಾಯಿತು.

ಜನಪ್ರತಿನಿಧಿಗಳು ಮಾಡಬೇಕಾದ ಕೆಲಸಗಳನ್ನು ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ. ಪೌರಸೇವಾ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ನೋಟಿಸ್ ನೀಡಿ ಗಬ್ಬೆದ್ದು ಹೋದ ನಗರಸಭೆ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಜಿಲ್ಲಾಧಿಕಾರಿ ಸತ್ಯವತಿ ಮಾಡುವ ಮೂಲಕ ನಗರಸಭೆ ಹಾದಿ ತಪ್ಪುತ್ತಿರುವುದನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ರಸ್ತೆಬದಿಯಲ್ಲಿ ಹೂವು, ಹಣ್ಣು ತರಕಾರಿ ಮಾರುತ್ತಿದ್ದ ಮಾರಾಟಗಾರರನ್ನೆಲ್ಲ ಸಂಚಾರಕ್ಕೆ ತೊಂದರೆಯಾಗುತ್ತವೆ ಎಂದು ಅವರ ಮನವೊಲಿಸಿ ನಗರಸಭೆಯ ಎಂ.ಜಿ.ರಸ್ತೆಯಲ್ಲಿರುವ ಮುಸಾಪೀರ್ ಕಟ್ಟಡದ ಖಾಲಿ ನಿವೇಶನದಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಹನುಮಂತಪ್ಪ ಸರ್ಕಲ್‍ನಲ್ಲಿ ಮಾರಾಟ ಮಾಡುತ್ತಿರುವವರನ್ನು ಜೆಡಿಎಸ್ ಕಚೇರಿ ಹಿಂಭಾಗಕ್ಕೆ ಸ್ಥಳಾಂತರಿಸಲಾಗಿದೆ. ಎಂಜಿ ರಸ್ತೆ ಕಾಮಗಾರಿ ಚುರುಕುಗೊಂಡಿದೆ. ಈಗ ಸಣ್ಣಪುಟ್ಟ ಕೆಲಸವನ್ನು ಜಿಲ್ಲಾಧಿಕಾರಿ ಅವರೇ ಮುತುವರ್ಜಿ ವಹಿಸಿರುವುದರಿಂದ ಜನರ ವಿಶ್ವಾಸ ಗಳಿಸಿದ್ದು ಇದಕ್ಕೆ ನಗರಸಭೆ ಶಭಾಷ್‍ಗಿರಿ ನೀಡಿತ್ತು.

ನಗರಸಭೆಯ ಪೂರೈಸುತ್ತಿರುವ ಕುಡಿಯುವ ನೀರಿನ ಕಂದಾಯ ಶೇ.25ರಷ್ಟು ಹೆಚ್ಚಳಗೊಳಿಸುವ ಬಗ್ಗೆ ಪ್ರಸ್ತಾಪಿಸಿದಾಗ ಮೊದಲು ಎಲ್ಲ ವಾರ್ಡ್‍ಗಳಿಗೆ ನೀರು ಕೊಡುವ ವ್ಯವಸ್ಥೆ ಮಾಡಿ 10 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುತ್ತಿದ್ದೀರಿ. ನಮ್ಮನ್ನು ಆಯ್ಕೆ ಮಾಡಿರುವ ಜನರಿಗೆ ಮೊದಲು ಕುಡಿಯುವ ನೀರಿನ ವ್ಯವಸ್ಥೆ ಮಾಡಿ. ನಂತರ ನೀರಿನ ಹೆಚ್ಚಳದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ ಎಂದು ಸದಸ್ಯರು ಅಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಶಾಸಕ ರವಿ, ನಗರಸಭೆಯಲ್ಲಿ ಎರಡು ಕೋಟಿ ಆದಾಯ ಬಂದರೆ 6 ಕೋಟಿ ಖರ್ಚಾಗುತ್ತದೆ. ಮೂಗಿಗಿಂತ ಮೂಗುತಿ ಬಾರ ಎನ್ನು ಸ್ಥಿತಿ ನಗರಸಭೆಯಲ್ಲಿದೆ ಎಂದರು. ವಾಣಿಜ್ಯ ಉದ್ದೇಶಕ್ಕಾಗಿ ನೀರನ್ನು ಬಳಕೆ ಮಾಡುತ್ತಿರುವವರಿಗೆ ಮೊದಲು ಮೀಟರ್ ಅಳವಡಿಸಿ ನಂತರ ಸಮರ್ಪಕ ನೀರಿನ ವ್ಯವಸ್ಥೆಯನ್ನು ಜಾರಿ ಮಾಡಿ. ಕಂದಾಯ ವಸೂಲಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ರವೀಂದ್ರ ಪ್ರಭು, ಪೌರಾಯುಕ್ತ ಶಿವಪ್ರಕಾಶ್ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin