ಶಾಸಕ ‘ಕಾಗೆ’ ಕುಟುಂಬದವರ ಗೂಂಡಾಗಿರಿ ಪ್ರಕರಣ : ನಾಲ್ವರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Raju-Kage

ಬೆಳಗಾವಿ, ಜ.15-ಬಿಜೆಪಿ ಶಾಸಕ ರಾಜುಕಾಗೆ ಕುಟುಂಬದವರ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಮಾಹಿತಿ ನೀಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಜ.16ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರವೀಂದ್ರ ನಾಗಾವೆ, ಮಲಗೊಂಡ ಪಾಟೀಲ್, ಶಂಕರ ವಾಗ್ಮೋಡೆ ಹಾಗೂ ಸುದರ್ಶನ್ ನಾಂದಣಿ ಅವರನ್ನು ಕಾಗವಾಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಶಾಸಕ ರಾಜುಕಾಗೆ ಸೇರಿದಂತೆ ಅವರ ಕುಟುಂಬದ 13 ಮಂದಿ ಜ.1ರಂದು ಕಾಂಗ್ರೆಸ್ ಕಾರ್ಯಕರ್ತ ವಿವೇಕ್‍ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಆರೋಪಿಗಳು ಪರಾರಿಯಾಗಲು ವಾಹನ ಸೌಲಭ್ಯ ಹಾಗೂ ಹಣಕಾಸು ನೆರವು ನೀಡಿದ ಆರೋಪದಲ್ಲಿ ಈ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಜ.9ರಂದು ಎಫ್‍ಐಆರ್ ದಾಖಲಾಗಿದ್ದರೂ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ.  ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದ ಬರ ಅಧ್ಯಯನ ತಂಡ ಇಂದು ಕಾಗವಾಡಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿ ಅವಲೋಕಿಸುವ ಕಾರ್ಯಕ್ರಮ ಇತ್ತು.

ಈ ಕಾರ್ಯಕ್ರಮದಲ್ಲಿ ಶಾಸಕ ರಾಜುಕಾಗೆ ಅವರು ಪಾಲ್ಗೊಳ್ಳಬೇಕಾಗಿತ್ತು. ಆದರೆ, ಹಲ್ಲೆ ಪ್ರಕರಣದಲ್ಲಿ ರಾಜುಕಾಗೆ ಸೇರಿದಂತೆ ಅವರ ಕುಟುಂಬದವರು ಪರಾರಿಯಾಗಿದ್ದಾರೆ ಮತ್ತು ಪೊಲೀಸರು ಹುಡುಕುತ್ತಿದ್ದಾರೆ. ಬರ ಪರಿಸ್ಥಿತಿ ಅಧ್ಯಯನ ಕಾರ್ಯಕ್ರಮದಲ್ಲಿ ರಾಜುಕಾಗೆ ಪಾಲ್ಗೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ಮುಜುಗರ ತಪ್ಪಿಸಿಕೊಳ್ಳಲು ಜಗದೀಶ್ ಶೆಟ್ಟರ್ ಅವರ ನೇತೃತ್ವದ ತಂಡ ಇಲ್ಲಿನ ಕಾರ್ಯಕ್ರಮವನ್ನು ಮುಂದೂಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin