ಶಿಕ್ಷಕರು ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೆಚ್ಚಿನ ಸಮಯಾವಕಾಶ ವಿನಿಯೋಗಿಸಿ

ಈ ಸುದ್ದಿಯನ್ನು ಶೇರ್ ಮಾಡಿ

4

ಗೋಕಾಕ,ಮಾ.13- ಶಿಕ್ಷಕರು ವೈಯಕ್ತಿಕ ಬದುಕಿಗಿಂತ ಶಾಲೆಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೆಚ್ಚಿನ ಸಮಯಾವಕಾಶ ವಿನಿಯೋಗಿಸಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶದಲ್ಲಿ ಮತ್ತೊಮ್ಮೆ ಪ್ರಥಮ ಸ್ಥಾನ ಗಿಟ್ಟಿಸಿಕೊಳ್ಳಲು ಶ್ರಮಿಸುವಂತೆ ಶಾಸಕ ಬಾಲಚಂದ್ರ ಜರಕಿಹೊಳಿ ತಿಳಿಸಿದರು.ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಎಲ್ಲ ಪ್ರೌಢ ಶಾಲೆಗಳ ಶಿಕ್ಷಕರಿಗೆ ಏರ್ಪಡಿಸಿದ್ದ ಎಸ್‍ಎಸ್‍ಎಲ್‍ಸಿ ಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು 2009ರಿಂದ ಸತತವಾಗಿ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಮೂಡಲಗಿ ವಲಯ ಎರಡು ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಸತತವಾಗಿ 7 ಬಾರಿ ಪ್ರಥಮ ಸ್ಥಾನಗಳಿಸುವ ಮೂಲಕ ತನ್ನ ಸ್ಥಿರತೆ ಕಾಯ್ದುಕೊಂಡಿದೆ. ಇದಕ್ಕೆ ವಲಯದ ಎಲ್ಲ ಶಿಕ್ಷಕರ ಪರಿಶ್ರಮವೇ ಕಾರಣವಾಗಿದೆ. ಈ ಬಾರಿಯೂ ವಲಯ ಸಾಧನೆ ಮೆರೆದು ರಾಜ್ಯಕ್ಕೆ ಕೀರ್ತಿ ತರುವಂತೆ ಹಾರೈಸಿದರು.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಿ ಶಾಲೆಯಲ್ಲಿಯೇ ಅಧ್ಯಯನ ಮಾಡಿಸುತ್ತಿರುವ ಶಿಕ್ಷಕರು ಇನ್ನೂ ಹೆಚ್ಚಿನ ಕಾಳಜಿ ವಹಿಸಿ ಪರೀಕ್ಷೆ ಮುಗಿಯುವವರೆಗೂ ನಿರ್ಮಿತ ಮನಸ್ಸನ್ನು ಮುಂದುವರೆಸಿಕೊಂಡು ಹೋಗಬೇಕು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಥಿರನಿಧಿ ಹೆಚ್ಚಿಸಿಕೊಳ್ಳಲು ದಾನಿಗಳು ಆರ್ಥಿಕವಾಗಿ ನೆರವು ಕಲ್ಪಿಸಿಕೊಡುವಂತೆ ಅವರು ಕೋರಿದರು.  ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರಿಂದ ಮನೆಮನೆಗಳಿಗೆ ಭೇಟಿ ನೀಡಿ ವಿಶೇಷ ವರ್ಗಗಳ ಆಯೋಜನೆ ಮಾಡಬೇಕು.ಪ್ರತಿಭಾವಂತ ಮಕ್ಕಳಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿ, ಕನಿಷ್ಠ ಕಲಿಕೆಯಲ್ಲಿರುವ ಮಕ್ಕಳಿಗೆ ಉತ್ತೇಜನಪರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.ಮೂಡಲಗಿ ವಲಯದ ಕೀರ್ತಿ ಪತಾಕೆ ಹಾರಲು ಮಾತನಾಡಿ ಎಲ್ಲ ಶಿಕ್ಷಕರು ಒಗ್ಗಟ್ಟಿನಿಂದ ಮಕ್ಕಳಿಗೆ ಬೋಧನೆ ಮಾಡಿ ರ್ಯಾಂಕ್ ತರುವಲ್ಲಿ ಮಹತ್ತರ ಪಾತ್ರ ವಹಿಸಬೇಕು.ಜೊತೆಗೆ ಎಸ್‍ಡಿಎಂಸಿ ಸದಸ್ಯರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಕಾಳಜಿಯಿಂದ ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಳ್ಳಿ.ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ.ನಕಲನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.ಪಾಲಕರು ಸಹ ತಮ್ಮ ಮಕ್ಕಳ ಓದಿಗಾಗಿ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಿಕೊಟ್ಟು ಮಕ್ಕಳ ಯಶಸ್ಸಿನಲ್ಲಿ ಪಾಲಕರು ಕೈಜೋಡಿಸುವಂತೆ ಅವರು ಕೋರಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಶಾಲೆಗೆ ಗೈರು ಹಾಜರಾಗುತ್ತಿರುವುದನ್ನು ತಪ್ಪಿಸಲು ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಕುರಿತು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪರೀಕ್ಷಾ ದಿನಗಳ ಮಧ್ಯಾವಧಿಯಲ್ಲಿ ವಿಶ್ರಾಂತಿ ದಿನಗಳಂದು ವಿಷಯವಾರು ಶಿಕ್ಷಕರಿಂದ ಮಾರ್ಗದರ್ಶನ ನೀಡುತ್ತೇವೆ. ಬಿಇಓ ಕಛೇರಿಯಿಂದ ಎಸ್‍ಎಸ್‍ಎಲ್‍ಸಿ ಮಕ್ಕಳ ಪಾಲಕರಿಗೆ ಫೋನ್  ಇನ್ ಕಾರ್ಯಕ್ರಮ ಏರ್ಪಡಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಣುಕು ಪರೀಕ್ಷೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಬಸವಂತ ಕಮತಿ, ಅಶೋಕ ಪರುಶೆಟ್ಟಿ, ಮುತ್ತೆಪ್ಪ ಕುಳ್ಳೂರ, ಪರಸಪ್ಪ, ಸುಧೀರ ಜೋಡಟ್ಟಿ, ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin