ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಿಸಲು ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

jeevaraj---tanveer-seth----
ಬೆಂಗಳೂರು, ಫೆ.7-ರಾಜ್ಯದಲ್ಲಿ ಶಿಥಿಲಗೊಂಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಿಸುವಂತೆ ಆದೇಶ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ಹೇಳಿದರು. ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಶೃಂಗೇರಿ ಕ್ಷೇತ್ರದಲ್ಲಿ ಮಹಲ್ ಗೌಡ್, ಬಾಳೆಹೊನ್ನೂರಿನ ಆರ್.ಪಿ.ಮಠ, ನರಸಿಂಹರಾಜಪುರ, ಮತ್ತಿಕೊಪ್ಪ ಶಾಲೆಗಳ ಮೇಲ್ಛಾವಣಿ ಬೀಳುವ ಹಂತದಲ್ಲಿವೆ. ಈ ಶಾಲೆಗಳ ದುಸ್ತಿಗೆ ಹತ್ತೂವರೆ ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು. ಇದರಿಂದ ಸಿಟ್ಟಾದ ಶಾಸಕ ಜೀವರಾಜ್ ಅವರು ಈ ಹಣದಲ್ಲಿ ಶಾಲೆ ದುರಸ್ತಿ ಮಾಡಲು ಸಾಧ್ಯವಿಲ್ಲ. ಮಕ್ಕಳಿಗೆ ಚಾಕೊಲೆಟ್ ಹಂಚಬಹುದಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಸಚಿವರು, ಕೇಂದ್ರ ಸರ್ಕಾರ ಸರ್ವಶಿಕ್ಷಣ ಅಭಿಯಾನದಡಿ 1631 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕಿತ್ತು. ಆದರೆ 641 ಕೋಟಿ ರೂ. ಮಾತ್ರ ನೀಡಿದೆ. ಅದರಲ್ಲೇ ಶಾಲಾ ಮೂಲಸೌಕರ್ಯ ಅಭಿವೃದ್ಧಿ ಮತ್ತು ಶಿಕ್ಷಕರ ವೇತನವನ್ನು ಪಾವತಿಸಬೇಕಿದೆ. ಹೀಗಾಗಿ ಅನುದಾನದ ಕೊರತೆಯಾಗುತ್ತಿದೆ. ಒಮ್ಮೆ ರಾಜ್ಯಸರ್ಕಾರ ಕಳುಹಿಸಿದ ಕ್ರಿಯಾಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಅಷ್ಟನ್ನು ಬಿಡುಗಡೆ ಮಾಡಬೇಕು, ಬಿಡುಗಡೆ ಮಾಡದೆ ಅನುದಾನದ ಕೊರತೆಯಾದರೆ ನಮ್ಮ ರಾಜ್ಯದ ಬಜೆಟ್‍ನಿಂದಲೂ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಈಗ ಕಂಡುಬರುತ್ತಿರುವ ತಾಂತ್ರಿಕ ಸಮಸ್ಯೆ ಎಂದು ಹೇಳಿದರು. ಶಾಲಾ ದುರಸ್ತಿಗಾಗಿ ಈಗಾಗಲೇ 566 ಕೋಟಿ ರೂ.ಗಳನ್ನು ರಾಜ್ಯಸರ್ಕಾರ ಬಿಡುಗಡೆ ಮಾಡಿದೆ. ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯಿಂದ 243 ಕೋಟಿ ರೂ. ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಲು ಆದೇಶಿಸಲಾಗಿದೆ ಎಂದು ವಿವರಿಸಿದರು.

Facebook Comments

Sri Raghav

Admin