ಶಿರಾಡಿ-ಚಾರ್ಮುಡಿಗೆ ಪರ್ಯಾಯ ರಸ್ತೆ ನಿರ್ಮಾಣ
ಬೆಂಗಳೂರು, ಮಾ.28- ಶಿರಾಡಿಘಾಟ್-ಚಾರ್ಮುಡಿ ಘಾಟ್ ರಸ್ತೆಗಳಿಗೆ ಪರ್ಯಾಯವಾಗಿ ಬೇರೆ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ವಿಧಾನ ಪರಿಷತ್ನಲ್ಲಿಂದು ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಲೇಹರ್ಸಿಂಗ್ ಅವರ ಪ್ರಶ್ನೆಗೆ ಮಹದೇವಪ್ಪ ಅವರ ಪರವಾಗಿ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಮೂಡಿಗೆರೆ-ಭೈರಾಪುರ ಶಿಶಿಲ ರಸ್ತೆಯನ್ನು ಶಿರಾಡಿಘಾಟ್-ಚಾರ್ಮುಡಿ ಘಾಟ್ ರಸ್ತೆಗಳಿಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಲು ಯೋಚಿಸಿ ವಿಸ್ತೃತ ಯೋಜನಾ ವರದಿ ತಯಾರಿಸಲು ಚಿಂತನೆ ನಡೆಸಲಾಗಿದೆ.
ಈ ಯೋಜನೆಯಿಂದ ನೈಸರ್ಗಿಕ ಸಂಪತ್ತು ಮತ್ತು ವನ್ಯಜೀವಿಗಳಿಗೆ ಧಕ್ಕೆಯಾಗುವುದಿಲ್ಲ ಎಂದರು. ಶಿರಾಡಿಘಾಟ್ ಮತ್ತು ಚಾರ್ಮುಡಿ ಘಾಟ್ ಪ್ರಯಾಣಕ್ಕೆ ಸಾಕಷ್ಟು ತೊಂದರೆಯಾಗುತ್ತಿರುವ ನಿಟ್ಟಿನಲ್ಲಿ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಡಿಪಿಆರ್ ರೂಪಿಸಲಾಗುತ್ತಿದೆ. ಮೂಡಿಗೆರೆಯಿಂದ ಭೈರಾಪುರ, ಶಿಶಿಲಾ, ಕೊಕ್ಕಡಾ ಮೂಲಕ ರಾಷ್ಟ್ರೀಯ ಹೆದ್ದಾರಿ-75ಕ್ಕೆ ತಲುಪಬಹುದಾಗಿದೆ. ಈ ರಸ್ತೆ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ನಡುವೆ ಹಾದು ಹೋಗುವುದರಿಂದ ವಿರೋಧ ವ್ಯಕ್ತವಾಗಿರುವುದು ಕೂಡ ಸರ್ಕಾರದ ಗಮನಕ್ಕೆ ಬಂದಿದ್ದು, ವಿಸ್ತೃತ ವರದಿಯ ನಂತರ ಸಾಧಕ-ಬಾಧಕಗಳ ಬಗ್ಗೆ ಕಾಮಗಾರಿ ಕೈಗೊಳ್ಳಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS