ಶಿವಮೊಗ್ಗ ಶಿಕಾರಿಗೆ ರಾಜಕೀಯ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Shivamogga-01-Yadiyurappa-B

ರವೀಂದ್ರ.ವೈ.ಎಸ್
ಬೆಂಗಳೂರು, ಡಿ.31-ರಾಜ್ಯ ರಾಜಕಾರಣದ ಶಕ್ತಿ ಕೇಂದ್ರಬಿಂದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ. ರಾಜ್ಯಕ್ಕೆ ಅತಿಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಏಕೈಕ ಜಿಲ್ಲೆ ಎಂಬ ಕೀರ್ತಿಗೂ ಪಾತ್ರವಾಗಿದೆ.   ಸಮಾಜವಾದಿ ಚಳವಳಿಗಳ ನೆಲೆನಾಡಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಕಾಲ ಕಳೆದ ನಂತರ ತುಂಗಭದ್ರ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಈ ಜಿಲ್ಲೆ ಇದೀಗ ಬಿಜೆಪಿಗೆ ಭದ್ರ ನೆಲೆ ಒದಗಿಸಿದ ಜಿಲ್ಲೆಯೂ ಹೌದು.

ಮಾಜಿ ಮುಖ್ಯಮಂತ್ರಿಗಳಾದ ಕಡಿದಾಳು ಮಂಜಪ್ಪ , ಎಸ್.ಬಂಗಾರಪ್ಪ ಬಿ.ಎಸ್.ಯಡಿಯೂರಪ್ಪ ಅವರಂತಹ ಘಟಾನುಘಟಿ ನಾಯಕರನ್ನು ರಾಜ್ಯಕ್ಕೆ ಪರಿಚಯಿಸಿದ ಶಿವಮೊಗ್ಗ ಜಿಲ್ಲೆಯಲ್ಲಿ 2018ರ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ದತೆಗಳು ನಡೆದಿವೆ.  ಮತದಾರರನ್ನು ಓಲೈಸಿಕೊಳ್ಳಲು ಎಲ್ಲ ರಾಜಕೀಯ ಮುಖಂಡರು ಅಭಿವೃದ್ದಿ ಹೆಸರಿನ ನೆಪದಲ್ಲಿ ಮತದಾರನ ಬಾಗಿಲು ಬಡಿಯುತ್ತಿದ್ದಾರೆ. ಕಾಂಗ್ರೆಸ್ ಸಾಧನಾ ಸಮಾವೇಶ ನಡೆಸಿದರೆ ಬಿಜೆಪಿ ಪರಿವರ್ತನಾ ರ್ಯಾಲಿ ಮಾಡುವ ಮೂಲಕ ಆಡಳಿತಾರೂಢ ಪಕ್ಷಕ್ಕೆ ಸೆಡ್ಡು ಹೊಡೆದಿದೆ. ಇನ್ನು ಜೆಡಿಎಸ್ ತಾನೇನೂ ಕಡಿಮೆ ಇಲ್ಲವೆಂಬಂತೆ ಕುಮಾರ ಪರ್ವ ನಡೆಸುವ ಮೂಲಕ ಎರಡು ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿದೆ.

ಹೀಗೆ ಮೂರು ಪಕ್ಷಗಳು ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವಂತೆ ಯಾವ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿದೆ.  ಈವರೆಗೂ ಯಾವುದೇ ಅಭ್ಯರ್ಥಿಗಳು ತಾನೇ ಮುಂದಿನ ಚುನಾವಣೆಗೂ ಅಭ್ಯರ್ಥಿ ಎಂದು ಗಟ್ಟಿ ಧ್ವನಿಯಲ್ಲಿ ಹೇಳುವ ಪರಿಸ್ಥಿತಿಯಲ್ಲಿಲ್ಲ. ಹಾಲಿ ಶಾಸಕರು ತಾವೇ ಅಭ್ಯರ್ಥಿಗಳು ಈಗಾಗಲೇ ಪ್ರಚಾರ ನಡೆಸುತ್ತಿದ್ದರಾದರೂ ಕೊನೆ ಗಳಿಗೆಯವರೆಗೂ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ.

ಜಿಲ್ಲೆಯಲ್ಲಿ ರಾಜಕೀಯ ಪಲ್ಲಟಗಳು ಸಾಕಷ್ಟು ನಡೆದಿವೆ. ಈವರೆಗೂ ಇಡೀ ಜಿಲ್ಲೆಯನ್ನೇ ತನ್ನ ವಶದಲ್ಲಿ ಇಟ್ಟುಕೊಳ್ಳುತ್ತಿದ್ದ ಎಸ್.ಬಂಗಾರಪ್ಪ ನಿಧನರಾಗಿ ವರ್ಷಗಳೇ ಕಳೆದಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಬಂಗಾರಪ್ಪನವರ ಸ್ಥಾನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತುಂಬುತ್ತಿದ್ದಾರೆ.   ಆದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಈವರೆಗೂ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ಬರಲು ಕಾರಣೀಭೂತರಾಗಿದ್ದ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಇದರ ಪರಿಣಾಮ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಮುಖಭಂಗಕ್ಕೆ ಒಳಗಾಗಿತ್ತು. ಶಿಕಾರಿಪುರದಲ್ಲಿ ಮಾತ್ರ ಕೆಜಿಪಿ ಗೆದ್ದರೆ ಶಿವಮೊಗ್ಗ ನಗರ ಮತ್ತು ತೀರ್ಥಹಳ್ಳಿಯಲ್ಲಿ ಆ ಪಕ್ಷದ ಅಭ್ಯರ್ಥಿಗಳು ಕೂದಲೆಳೆ ಅಂತರದಲ್ಲಿ ಪರಾಭವಗೊಂಡಿದ್ದರು.   ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಅಭ್ಯರ್ಥಿಗಳು ಯಾರಾಗಬಹುದು ಎಂಬುದರ ಸಿಂಹಾವಲೋಕನ ಇಲ್ಲಿದೆ.

ಶಿವಮೊಗ್ಗ ನಗರ:

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಗಮನಸೆಳೆಯಬಹುದಾದ ಮೊದಲ ಕ್ಷೇತ್ರವೆಂದರೆ ಶಿವಮೊಗ್ಗ ನಗರ. ಹಾಲಿ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪನವರು ಟಿಕೆಟ್‍ಗಾಗಿ ಸರ್ಕಸ್ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಪರಮಾಪ್ತ ಹಾಗೂ ಶಿವಮೊಗ್ಗ ಜಿಲ್ಲೆಯ ಬಿಜೆಪಿ ಅಧ್ಯಕ್ಷ ರುದ್ರೇಗೌಡರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.   ಈಶ್ವರಪ್ಪ ತಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳತ್ತಿದ್ದರೆ ಬಿಎಸ್‍ವೈ ಮಾತ್ರ ಟಿಕೆಟ್ ತಪ್ಪಿಸಲು ತಮ್ಮೆಲ್ಲ ತಂತ್ರಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಇಬ್ಬರ ಕುಸ್ತಿಯಲ್ಲಿ ಯಾರಿಗೆ ಟಿಕೆಟ್ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಒಂದು ವೇಳೆ ಈಶ್ವರಪ್ಪನವರಿಗೆ ಟಿಕೆಟ್ ಕೈತಪ್ಪಿದರೆ ಅವರು ಪಕ್ಷದ ಪರ ಪ್ರಚಾರ ನಡೆಸುವರೇ ಎಂಬ ಜಿಜ್ಞಾಸೆ ಎದುರಾಗಿದೆ. ಉಳಿದಂತೆ ಕಾಂಗ್ರೆಸ್‍ನಿಂದ ಹಾಲಿ ಶಾಸಕ ಪ್ರಸನ್ನಕುಮಾರ್, ಜೆಡಿಎಸ್‍ನಿಂದ ನಿರಂಜನ್ ಮತ್ತು ಶ್ರೀಕಾಂತ್ ಹೆಸರುಗಳು ಚಾಲ್ತಿಯಲ್ಲಿವೆ.

ಶಿವಮೊಗ್ಗ ಗ್ರಾಮಾಂತರ:

ಮೀಸಲು ಕ್ಷೇತ್ರವಾಗಿರುವ ಶಿವಮೊಗ್ಗ ಗ್ರಾಮಾಂತರದಲ್ಲಿ ಹಾಲಿ ಶಾಸಕಿ ಶಾರದಾ ಪೂರ್ಯ ನಾಯಕ್ ಚಿತ್ತ ಎತ್ತ ಎಂಬ ಪ್ರಶ್ನೆಯೂ ಮೂಡಿದೆ.
ಶಾರದಾ ಪೂರ್ಯ ನಾಯಕ್ ಅವರನ್ನು ಖುದ್ದು ಬಿಜೆಪಿಗೆ ಕರೆತರಲು ಯಡಿಯೂರಪ್ಪ ಆಸಕ್ತಿ ವಹಿಸಿದ್ದಾರೆ. ಆದರೆ ಈ ಬಗ್ಗೆ ಅವರು ತಮ್ಮ ನಿಲುವನ್ನು ಪ್ರಕಟಿಸಿಲ್ಲ.
ಉಳಿದಂತೆ ಬಿಜೆಪಿಯಿಂದ ಕೆ.ಜಿ.ಕುಮಾರಸ್ವಾಮಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‍ನಿಂದ ಈವರೆಗೂ ಅಭ್ಯರ್ಥಿ ಯಾರೆಂಬುದು ಪ್ರಕಟವಾಗಿಲ್ಲ.

ಭದ್ರಾವತಿ:

ಜಿದ್ದಾಜಿದ್ದಿನ ಕುರುಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ಭದ್ರಾವತಿಯಲ್ಲಿ ಈ ಬಾರಿಯ ಚುನಾವಣೆ ರಾಜ್ಯದ ಗಮನಸೆಳೆಯುವಲ್ಲಿ ಸಂದೇಹವೇ ಇಲ್ಲ. ಹಣ ಬಲ, ತೋಳ್ಬಲಕ್ಕೆ ಕುಖ್ಯಾತಿ ಪಡೆದಿರುವ ಈ ಕ್ಷೇತ್ರದಲ್ಲಿ ಹಾಲಿ ಶಾಸಕ ಜೆಡಿಎಸ್‍ನ ಅಪ್ಪಾಜಿಗೌಡ, ಕಾಂಗ್ರೆಸ್‍ನಿಂದ ಮಾಜಿ ಶಾಸಕ ಸಂಗಮೇಶ್, ಬಿಜೆಪಿಯಿಂದ ಯಶವಂತ ಜಾದವ್, ಮಾಜಿ ರಾಜ್ಯಸಭಾ ಸದಸ್ಯ ಅಯನೂರು ಮಂಜುನಾಥ್ ಹೆಸರು ಕೇಳಬರುತ್ತಿದೆ.

ತೀರ್ಥಹಳ್ಳಿ:

ತನ್ನ ವಿಶಿಷ್ಟತೆಯಿಂದಲೇ ಜಿಲ್ಲೆಗೆ ಹೆಸರು ತಂದುಕೊಟ್ಟಿರುವ ಕ್ಷೇತ್ರವೆಂದರೆ ರಸಋಷಿ, ರಾಷ್ಟ್ರಕವಿ ಕುವೆಂಪು ಹುಟ್ಟಿದ ತೀರ್ಥಹಳ್ಳಿ. ಬಹುತೇಕ ವಿದ್ಯಾವಂತ ಮತದಾರರನ್ನು ಹೊಂದಿರುವ ಈ ಕ್ಷೇತ್ರ ಒಂದು ಬಾರಿ ಬಿಜೆಪಿ ಮತ್ತೊಂದು ಬಾರಿ ಕಾಂಗ್ರೆಸ್‍ಗೆ ಒಲಿದಿದೆ.  ಸತತವಾಗಿ ನಾಲ್ಕು ಬಾರಿ ಗೆದ್ದಿದ್ದ ಮಾಜಿ ಶಾಸಕ ಅರಗ ಜ್ಞಾನೇಂದ್ರ ಬಿಜೆಪಿ ಹುರಿಯಾಳು. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕಿಮ್ಮನೆ ರತ್ನಾಕರ ಕಾಂಗ್ರೆಸ್‍ನಿಂದ ಸ್ಪರ್ಧಿಸುವ ತಯಾರಿಯಲ್ಲಿದ್ದಾರೆ.  ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಕೂಡ ಕಾಂಗ್ರೆಸ್‍ನಿಂದ ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ. ಆದರೆ ಹಾಲಿ ಶಾಸಕರಿಗೆ ಮಣೆ ಹಾಕುವುದಾದರೆ ಮಂಜುನಾಥ್ ಗೌಡ, ಜೆಡಿಎಸ್‍ನಿಂದ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಶಿಕಾರಿಪುರ:

ಇಡೀ ರಾಜ್ಯದ ಗಮನವನ್ನೇ ಸೂಜಿಗಲ್ಲಿನಂತೆ ಸೆಳೆದಿರುವ ಕ್ಷೇತ್ರ ಶಿಕಾರಿಪುರ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಆ ಪಕ್ಷದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಬಿ.ಎಸ್.ಯಡಿಯೂರಪ್ಪ ಇಲ್ಲಿ ಕಮಲ ಪಕ್ಷದ ಅಭ್ಯರ್ಥಿ ಹಾಲಿ ಶಾಸಕ ಬಿ.ವೈ.ರಾಘವೇಂದ್ರ ಅಪ್ಪನಿಗಾಗಿ ಕ್ಷೇತ್ರವನ್ನೇ ತ್ಯಾಗ ಮಾಡಲು ಮುಂದಾಗಿದ್ದಾರೆ.  ಆನೆ ನಡೆದದ್ದೇ ದಾರಿ ಎಂಬಂತೆ ಶಿಕಾರಿಪುರದಲ್ಲಿ ಯಡಿಯೂರಪ್ಪನವರಿಗೆ ಸ್ಪರ್ಧೆ ನೀಡುವಂತಹ ಅಭ್ಯರ್ಥಿಗಳು ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಇಲ್ಲ. ಮಾಜಿ ಶಾಸಕ ಶಾಂತವೀರಪ್ಪ ಗೌಡ ಸದ್ಯಕ್ಕೆ ಬಿಜೆಪಿಯಲ್ಲಿದ್ದರೂ ಕೊನೆ ಕ್ಷಣದಲ್ಲಿ ಅವರೇ ಕೈ ಹುರಿಯಾಳಾಗಬಹುದು.
ಇನ್ನು ಜೆಡಿಎಸ್‍ಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲವಾದರೂ ಅಭ್ಯರ್ಥಿ ಹುಡುಕಾಟ ನಡೆಯುತ್ತಿದೆ.

ಸಾಗರ:

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರತಿನಿಧಿಸುವ ಸಾಗರ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗಲಿದೆ. 2004 ಮತ್ತು 2008ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮಾವನನ್ನೇ ಎದುರಿಸಿ ಗೆದ್ದು ಬಂದವರು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ.  2013ರ ವಿಧಾನಸಭೆ ಚುನಾವಣೆಯಲ್ಲಿ ಅನುಕಂಪದ ಮೇಲೆ ಭಾರೀ ಮತಗಳ ಅಂತರದಿಂದ ಗೆದ್ದಿದ್ದ ಕಾಗೋಡಿಗೆ ಈಗ ಬೇಳೂರು ಪ್ರಬಲ ಸ್ಪರ್ಧಿ. ಈವರೆಗೂ ಬಿಜೆಪಿಯಿಂದ ಬೇಳೂರೆ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಹಬ್ಬಿತ್ತು. ಯಾವಾಗ ಮಾಜಿ ಸಚಿವ ಕುಮಾರಬಂಗಾರಪ್ಪ ಕಾಂಗ್ರೆಸ್ ಬಿಟ್ಟು ಬಿಜೆಪಿ ಕೈ ಹಿಡಿದರೋ ಪರಿಸ್ಥಿತಿ ಬದಲಾಗಿದೆ.

ಮಾಜಿ ಸಚಿವ ಹರತಾಳ್ ಹಾಲಪ್ಪ ಅವರನ್ನು ಸಾಗರದಿಂದ ಸ್ಪರ್ಧಿಸಲು ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಮೊನ್ನೆ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಬಿಎಸ್‍ವೈ ಈ ಕ್ಷೇತ್ರದಿಂದ ನಿರ್ದಿಷ್ಟ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಿಲ್ಲ. ಇನ್ನು ಕಾಗೋಡು ತಿಮ್ಮಪ್ಪ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ಅವರ ಪುತ್ರಿ ಅಖಾಡಕ್ಕೆ ಇಳಿಯಬಹುದೆಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಕೈ ತಪ್ಪಿದರೆ ಅವರು ಜೆಡಿಎಸ್‍ನಿಂದ ಅಖಾಡಕ್ಕೆ ಇಳಿದರೂ ಅಚ್ಚರಿಯಿಲ್ಲ.

ಸೊರಬ:

ಸಹೋದರರ ಸವಾಲಿನಿಂದಾಗಿ ರಾಜ್ಯದ ಗಮನ ಸೆಳೆದ ಕ್ಷೇತ್ರವೆಂದರೆ ಸೊರಬ. ಬಂಗಾರಪ್ಪನವರ ಪುತ್ರರಾದ ಹಾಲಿ ಶಾಸಕ ಮಧುಬಂಗಾರಪ್ಪ , ಮಾಜಿ ಸಚಿವ ಕುಮಾರಬಂಗಾರಪ್ಪ ಕೂಡ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಮತ್ತೋರ್ವ ಮಾಜಿ ಸಚಿವ ಹರತಾಳು ಹಾಲಪ್ಪ ಬಿಜೆಪಿಯಿಂದ ಅಖಾಡಕ್ಕಿಳಿಯಲು ಸಜ್ಜಾಗುತ್ತಿದ್ದಾರೆ.  ಜೆಡಿಎಸ್‍ನಿಂದ ಮಧುಬಂಗಾರಪ್ಪ , ಬಿಜೆಪಿಯಿಂದ ಹಾಲಪ್ಪ ಇಲ್ಲವೇ ಕುಮಾರ್‍ಬಂಗಾರಪ್ಪ ಕಣಕ್ಕಿಳಿಯಬಹುದು. ಕಾಂಗ್ರೆಸ್‍ನಿಂದ ಈವರೆಗೂ ಅಂತಹ ಹೆಸರುಗಳು ಕೇಳಿಬರುತ್ತಿಲ್ಲ.

Facebook Comments

Sri Raghav

Admin