ಶಿವರಾಮಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣ : ಹೈಕೋರ್ಟ್ ತಜೆಯಾಜ್ಞೆ, ಬಿಎಸ್ವೈ ಸೇಫ್

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-BSY

ಬೆಂಗಳೂರು,ಸೆ.22-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿವರಾಮಕಾರಂತ ಬಡಾವಣೆಯಲ್ಲಿ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿಸಿ ಎಸಿಬಿ ಸಲ್ಲಿಸಿದ್ದ ಎಫ್‍ಐಆರ್‍ಗಳಿಗೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ತಡೆ ನೀಡಿರುವುದರಿಂದ ಬಿಎಸ್‍ವೈಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದಂತಾಗಿದೆ. ಡಾ.ಶಿವರಾಮ ಕಾರಂತ ಬಡಾವಣೆ ಡಿನೋಟಿಫೈ ಪಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅರವಿಂದ್‍ಕುಮಾರ್ ಅವರಿದ್ದ ಏಕಸದಸ್ಯ ಪೀಠ ಅರ್ಜಿದಾರರ ವಾದ ಮತ್ತು ಎಸಿಬಿಯ ಪ್ರತಿ ವಾದಗಳನ್ನು ಆಲಿಸಿ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಎಫ್‍ಐಆರ್ ದಾಖಲಿಸಿಕೊಳ್ಳಲು ಎಸಿಬಿ ವಿಳಂಬ ಮಾಡಿದೆ. ಒಂದೇ ದೂರಿಗೆ ಸಂಬಂಧಿಸಿದಂತೆ ಎರಡು ಎಫ್‍ಐಆರ್‍ನ ದಾಖಲಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತು ಮಾಡುವಂತಹ ವಿವರಗಳು ಕಂಡುಬಂದಿಲ್ಲ ಎಂಬ ಹಲವು ಅಂಶಗಳನ್ನು ಆಧರಿಸಿ ನ್ಯಾಯಪೀಠ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.  ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಅವರು ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ ಆದೇಶದ ಉಕ್ತಲೇಖನ ನೀಡಿದರು. ಅರ್ಜಿದಾರರು ಪ್ರಸ್ತಾಪಿಸಿರುವ ಎಲ್ಲ ಅಂಶಗಳನ್ನು ಕ್ರೋಢೀಕರಿಸಿ ಎಸಿಬಿಯ ವಾದವನ್ನು ನ್ಯಾಯಪೀಠ ಸಾರಾಸಗಾಟಾಗಿ ತಳ್ಳಿಹಾಕಿದೆ. ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸರ್ಕಾರಕ್ಕೆ ನಷ್ಟವಾಗಿದೆ ಎಂಬ ವಾದದಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಯಡಿಯೂರಪ್ಪ ವಿರುದ್ಧ ಎಸಿಬಿ ದಾಖಲಿಸಿರುವ ಎಫ್‍ಐಆರ್ ಬಗ್ಗೆ ತನಿಖೆ ನಡೆಸುವಲ್ಲೂ ಕೂಡ ತಾರತಮ್ಯ ಎಸಗಲಾಗಿದೆ. ಹೀಗಾಗಿ ಎಸಿಬಿ ಅಧಿಕಾರಿಗಳ ಬಗ್ಗೆ ಸಂಶಯ ಬರುವುದು ಸಹಜ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.  ದೂರುಗಳನ್ನು ಆಧರಿಸಿ ಎಫ್‍ಐಆರ್ ದಾಖಲಿಸಿಲ್ಲ. ಒಂದಾದ ಮೇಲೆ ಒಂದರಂತೆ ತನಿಖೆ ನಡೆಸಿಲ್ಲ. ಎಸಿಬಿಯ ನ್ಯೂನತೆಗಳು ಇವೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ತಡೆ ಕೊಟ್ಟಿದೆ.  ಬಿಎಸ್‍ವೈ ಪರ ವಕೀಲ ಸಿ.ವಿ.ನಾಗೇಶ್ ಅವರು, ರಾಜಕೀಯ ಕಾರಣಗಳಿಗೋಸ್ಕರ ಯಡಿಯೂರಪ್ಪ ಅವರ ಮೇಲೆ ದೂರು ದಾಖಲಿಸಲಾಗಿದೆ. ಎಸಿಬಿ ದಾಖಲಿಸಿರುವ ಎಫ್‍ಐಆರ್‍ಗಳು ಕಾನೂನು ಬಾಹಿರವಾಗಿದ್ದು ರದ್ದುಗೊಳಿಸಬೇಕೆಂದು ಪ್ರಬಲ ವಾದ ಮಂಡಿಸಿದ್ದರು.  ಎಸಿಬಿ ಪರ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.

Facebook Comments

Sri Raghav

Admin