ಶೀಘ್ರದಲ್ಲೇ ಸಿದ್ದು ಸರ್ಕಾರದ ಬೃಹತ್ ಹಗರಣ ಬಯಲು : ಬಿಎಸ್ವೈ ಬಿಗ್ ಬಾಂಬ್

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa---Eshwarappa--0

ಬೆಂಗಳೂರು, ಅ.5- ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಡೆಸಿರುವ ಬೃಹತ್ ಹಗರಣವನ್ನು ಶೀಘ್ರದಲ್ಲೇ ಬಯಲು ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ವಿಧಾನಪರಿಷತ್ ಸದಸ್ಯ ಬಿ.ಜಿ.ಪುಟ್ಟಸ್ವಾಮಿ ಅವರು ಸದ್ಯದಲ್ಲೇ ಪತ್ರಿಕಾಗೋಷ್ಠಿ ಕರೆದು ಸರ್ಕಾರದ ಹಗರಣವನ್ನು ದಾಖಲೆಗಳ ಸಮೇತ ಬಿಡುಗಡೆ ಮಾಡಲಿದ್ದಾರೆ. ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಸರ್ಕಾರದ ಮುಖವಾಡ ಕಳಚಲಿದ್ದೇವೆ ಎಂದು ಎಚ್ಚರಿಸಿದರು.

ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಂದಿನ ಮೂರು ದಿನಗಳಲ್ಲಿ ಸರ್ಕಾರದ ಒಂದೊಂದೇ ಹಗರಣವನ್ನು ಬಯಲು ಮಾಡಲಾಗುವುದು. ಕಾಂಗ್ರೆಸ್ ಸರ್ಕಾರದ ಸಚಿವರು ಮತ್ತು ಶಾಸಕರ ಭ್ರಷ್ಟಾಚಾರವನ್ನು ಸಾರ್ವಜನಿಕರ ಮುಂದಿಡಲಿದ್ದೇವೆ ಎಂದರು.  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಿಜವಾಗಿಯೂ ಭ್ರಷ್ಟರ ವಿರುದ್ಧ ಹೋರಾಟ ಮಾಡುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾರೂ ಮಾತನಾಡುತ್ತಾರೋ ಅಂತಹವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವ ಸಂಸ್ಥೆಯಾಗಿದೆ. ಆದ್ದರಿಂದಲೇ ಎಸಿಬಿಯಲ್ಲಿ ಎಷ್ಟೇ ದೂರುಗಳು ದಾಖಲಾದರೂ ಯಾರ ವಿರುದ್ಧವೂ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಒಂದು ವೇಳೆ ಎಸಿಬಿ ಸಕ್ರಿಯವಾಗಿ ಕೆಲಸ ಮಾಡಿದ್ದರೆ ಅನೇಕ ಸಚಿವರು ಮತ್ತು ಶಾಸಕರ ಬಂಡವಾಳ ಬಯಲಾಗುತ್ತಿತ್ತು. ಎಸಿಬಿ ಅಧಿಕಾರಿಗಳು ಪ್ರತಿಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಐಟಿ ಅಧಿಕಾರಿಗಳ ಮೇಲೆ ದಾಳಿ ಮಾಡಲು ಇವರು ಮುಂದಾಗಿದ್ದು ಬಟಾಬಯಲಾಗಿದೆ ಎಂದು ಕಿಡಿಕಾರಿದರು.

ಅಸಮಧಾನ:

ತಮ್ಮ ಸರ್ಕಾರದ ಅವಧಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಲು ತೀರ್ಮಾನಿಸಲಾಗಿತ್ತು. ಅಲ್ಲದೆ, ವಾಲ್ಮೀಕಿ ಅಭಿವೃದ್ಧಿ ಪ್ರಾಧಿಕಾರಕ್ಕೆ 2 ಕೋಟಿ ಅನುದಾನ ನೀಡಲಾಗಿತ್ತು. ಈಗ ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯಕ್ಕೆ ತಾವೇ ಎಲ್ಲವನ್ನು ಮಾಡಿದ್ದೇವೆ ಎಂದು ಟಾಮ್‍ಟಾಮ್ ಹೊಡೆಯುತ್ತಿದ್ದಾರೆ ಎಂದು ಬಿಎಸ್‍ವೈ ಹರಿಹಾಯ್ದರು. ನಾನು ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಹೋದರೆ ಜನರು ಎದ್ದು ನಿಂತು ಜೈಕಾರ ಹಾಕಬಹುದು ಎಂಬ ಕಾರಣಕ್ಕೆ ಸರ್ಕಾರ ನನ್ನನ್ನು ಆಹ್ವಾನಿಸಿಲ್ಲ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅದ್ಧೂರಿಯಾಗಿ ವಾಲ್ಮೀಕಿ ಜಯಂತಿ ಮಾಡುವುದಾಗಿ ಹೇಳಿದರು.

ಹಣ ತಲುಪಿಲ್ಲ:

ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಘೋಷಣೆ ಮಾಡಿ ಮೂರು ತಿಂಗಳಾದರೂ ಈವರೆಗೂ ಸಹಕಾರ ಸಂಸ್ಥೆಗಳಿಗೆ ಹಣ ತುಲುಪಿಲ್ಲ. ಇದರಿಂದ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರೇ ಇದನ್ನು ಬಹಿರಂಗ ಮಾಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ಬರಗಾಲದ ಅನುದಾನವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಕೇಂದ್ರದ ಅನುದಾನವನ್ನು ಹೊರತುಪಡಿಸಿದರೆ ರಾಜ್ಯ ಸರ್ಕಾರ ತನ್ನ ಪಾಲಿನ ನಯಾಪೈಸೆವನ್ನೂ ನೀಡಿಲ್ಲ ಎಂದು ಸಚಿವರೇ ಹೇಳಿರುವಾಗ ಈ ಸರ್ಕಾರಕ್ಕೆ ರೈತರ ಬಗ್ಗೆ ಕಳಕಳಿ ಇದೆಯೇ ಎಂದು ಪ್ರಶ್ನಿಸಿದರು.
ರೈತರ ಜತೆ ಚಲ್ಲಾಟವಾಡುವುದನ್ನು ನಿಲ್ಲಿಸಿ. ಮೊದಲು ರೈತರಿಗೆ ಹಣ ತಲುಪುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಅನ್ನದಾತ ದಂಗೆ ಹೇಳಲಿದ್ದಾನೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜುಗೌಡ ನಾಯಕ್, ಮಾಜಿ ಶಾಸಕ ಸೋಮಪ್ಪ ನಾಯಕ್, ಪ್ರಧಾನಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin