ಶೀಲ ಶಂಕಿಸಿ ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ
ಮೈಸೂರು,ಡಿ.18-ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮೈಸೂರಿನಲ್ಲಿ ನೆಲೆಸಿದ್ದ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ನಿವಾಸಿ ಅಮಿತ್ಬಾಬು(38) ತನ್ನ ಪತ್ನಿ ಪ್ರಿಯಾಳ ನಡತೆ ಬಗ್ಗೆ ಅನುಮನ ಹೊಂದಿದ್ದ. ಅಮಿತ್ ಬಾಬು ಪ್ರಿಯಾಳನ್ನು ಪ್ರೀತಿಸಿ ವಿವಾಹವಾಗಿದ್ದ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಮಿತ್ ಕುಡಿತದ ಚಟಕ್ಕೆ ಬಿದ್ದು ಕೆಲಸವನ್ನೂ ಬಿಟ್ಟಿದ್ದನು. ಪತ್ನಿ ಪ್ರಿಯ ಇಲ್ಲಿನ ಹೊಟೇಲ್ವೊಂದರಲ್ಲಿ ಕೆಲಸ ಮಾಡಿ ಸಂಸಾರ ನಿರ್ವಹಿಸುತ್ತಿದ್ದಳು. ಮೊದಲೇ ಅವಳ ಮೇಲೆ ಅನುಮಾನಗೊಂಡಿದ್ದ ಅಮಿತ್ ಸದಾ ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ. ಅವನಿಗೆ ಹಣ ಕೊಟ್ಟು ಕೊಟ್ಟು ರೋಸಿ ಹೋಗಿದ್ದ ಪತ್ನಿ ಒಂದು ದಿನ ಹಣ ಕೊಡಲಿಲ್ಲ.
ಇದರಿಂದ ಕೋಪಗೊಂಡ ಪತಿ ಪತ್ನಿಯನ್ನು 2013ರ ಅ.8ರಂದು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಹಂತಕನಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ. ದೇವರಾಜ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸಿದ್ದರು.
Eesanje News 24/7 ನ್ಯೂಸ್ ಆ್ಯಪ್ – Click Here to Download