ಶುದ್ಧ ನೀರಿನ ಘಟಕ ದುರಸ್ತಿಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

TURVEKERE

ತುರುವೇಕೆರೆ, ಫೆ.15- ಕಳೆದ ಒಂದೂವರೆ ತಿಂಗಳಿನಿಂದ ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕವನ್ನು ಕೂಡಲೇ ಸರಿಪಡಿಸಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆಂದು ತಾಲೂಕಿನ ದಂಡಿನಶಿವರ ಗ್ರಾಮದ ಸಾರ್ವಜನಿಕರು ಒತ್ತಾಯಿಸಿದ್ದಾರೆ.ತಾಲೂಕಿನ ದಂಡಿನಶಿವರ ಗ್ರಾಮ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಸುಮಾರು ಆರು ತಿಂಗಳ ಹಿಂದೆ ದಂಡಿನಶಿವರ ಹಾಗೂ ಅಮ್ಮಸಂದ್ರ ಎರಡೂ ಕಡೆಗಳಲ್ಲಿ ಸರ್ಕಾರದ ವತಿಯಿಂದ ಶುದ್ಧ ನೀರಿನ ಘಟಕಗಳನ್ನು ಪ್ರಾರಂಭಿಸಲಾಯಿತು. ಆದರೆ, ಕಳೆದ ಎರಡು ತಿಂಗಳುಗಳಿಂದ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ. ಸಾರ್ವಜನಿಕರು ಕೊಳವೆ ಬಾವಿಯ ನೀರನ್ನು ಕುಡಿಯಲಾರಂಭಿಸಿದ್ದಾರೆ. ಫಿಲ್ಟರ್ ನೀರಿಗೆ ಹೊಂದಿಕೊಂಡಿದ್ದ ಇಲ್ಲಿನ ಜನರಿಗೆ ಮತ್ತೆ ಕೊಳವೆ ಬಾವಿ ನೀರು ಕುಡಿಯುವ ಪರಿಸ್ಥಿತಿ ಉಂಟಾಗಿದೆ.

ಕೆಲವರು ಮೂರು ಕಿಮೀ ದೂರದಲ್ಲಿರುವ ಹುಲ್ಲೇಕೆರೆ ಗ್ರಾಮದಿಂದ ಶುದ್ಧ ಕುಡಿಯುವ ನೀರನ್ನು ತರುತ್ತಿದ್ದಾರೆ. ಕೊಳವೆಬಾವಿ ನೀರಿನಲ್ಲಿ ಫೋರೈಡ್ ಅಂಶ ಹೆಚ್ಚಾಗಿದ್ದು, ಈ ನೀರನ್ನು ಉಪಯೋಗಿಸುತ್ತಿರುವ ಹಲವು ಜನರು ಮತ್ತು ಮಕ್ಕಳ ಆರೋಗ್ಯ ಹದಗೆಡುತ್ತಿದೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯ್ತಿ ಪಿಡಿಒ ಹಾಗೂ ಅಧ್ಯಕ್ಷರ ಗಮನಕ್ಕೆ ತಂದರೂ ರಿಪೇರಿ ಮಾಡಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ.ಸರ್ಕಾರ ಕೇವಲ ಹಣ ಖರ್ಚು ಮಾಡಿ ಘಟಕಗಳನ್ನು ಉದ್ಘಾಟಿಸಿದರೆ ಸಾಲದು ಜತೆಗೆ ಅದರ ನಿರ್ವಹಣೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಶೀಘ್ರದಲ್ಲಿಯೇ ಶುದ್ಧ ನೀರಿನ ಘಟಕ ಸರಿಪಡಿಸದಿದ್ದರೆ ಗ್ರಾಮ ಪಂಚಾಯ್ತಿ ಎದುರು ಧರಣಿ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.ಅಂಗನವಾಡಿಯ ಪುಟಾಣಿ ಮಕ್ಕಳೂ ಸಹ ನಮಗೆ ಶುದ್ಧ ನೀರನ್ನು ಕೊಟ್ಟು ನಮ್ಮ ಆರೋಗ್ಯ ಕಾಪಾಡಿ ಎಂದು ಬಿಂದಿಗೆ ಕೈಯಲ್ಲಿ ಹಿಡಿದು ಗ್ರಾಮಸ್ಥರ ಜತೆ ಕೈಜೋಡಿಸಿದ್ದು ವಿಶೇಷವಾಗಿತ್ತು.ಗ್ರಾಮದ ಮುಖಂಡರಾದ ವೆಂಕಟೇಶ್, ಇಂದ್ರಕುಮಾರ್, ಮೂರ್ತಿ, ಪಾಂಡುರಂಗಯ್ಯ, ಕಾಂತರಾಜು, ದೇವರಾಜು , ರತ್ನಮ್ಮ, ಪುಟ್ಟಮ್ಮ, ಶಾಂತಮ್ಮ, ಶಾರದಮ್ಮ ಸೇರಿದಂತೆ ಇತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin