ಶುಲ್ಕ ವಸೂಲಿ ವಸೂಲಿ ಮಾಡುವ ಶಾಲೆಗಳಿಗೆ ಬೀಗ

ಈ ಸುದ್ದಿಯನ್ನು ಶೇರ್ ಮಾಡಿ

Education

ಬೆಂಗಳೂರು, ಆ.29- ಶುಲ್ಕ ವಸೂಲಿ ಸೇರಿದಂತೆ ಕಾನೂನು ಉಲ್ಲಂಘನೆ ಮಾಡುವ ಖಾಸಗಿ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಿದ್ದು ಶಾಲೆ ಮುಚ್ಚಿಸಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಇಂದಿಲ್ಲಿ ಎಚ್ಚರಿಕೆ ನೀಡಿದರು.  ಶಾಸಕರ ಭವನದಲ್ಲಿಂದು ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ಮುಂದಿಟ್ಟುಕೊಂಡು ಕಾನೂನು ಉಲ್ಲಂಘಿಸುವ ಶಾಲೆಗಳಿಗೆ ರಕ್ಷಣೆ ನೀಡುವುದಿಲ್ಲ. ತಪ್ಪು ಮಾಡಿದ ಶಾಲೆಗಳಿಗೆ ಕಾನೂನು ರೀತಿ ಕ್ರಮಕೈಗೊಂಡು ಅಂತಹ ಶಾಲೆಗಳ ಮಕ್ಕಳ ಭವಿಷ್ಯ ರೂಪಿಸಲು ಪರ್ಯಾಯ ವ್ಯವಸ್ಥೆ ಮಾಡಲು ಸರ್ಕಾರ ಸಿದ್ಧವಿದೆ ಎಂದರು.

ಸುಪ್ರೀಂಕೋರ್ಟ್ನ ನಿರ್ದೇಶನದ ಪ್ರಕಾರ ಖಾಸಗಿ ಶಾಲೆಗಳು ತರಗತಿ ವಾರು ಶುಲ್ಕ ಪ್ರಕಟಿಸಬೇಕು ಎಂದ ಅವರು, ನಿತ್ಯವೂ ಹೊಸ ಶಾಲೆ ಪ್ರಾರಂಭವಾಗುತ್ತಿವೆ. ಇವುಗಳನ್ನು ನಿಯಂತ್ರಿಸುವುದು ಸದ್ಯಕ್ಕೆ ಕಷ್ಟವಾಗಿದೆ ಎಂದು ಹೇಳಿದರು.  ಖಾಸಗಿ ಶಾಲೆಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಸ್ಪಷ್ಟ ಆದೇಶ ಹೊರಡಿಸಲು ಅವಕಾಶವಿದೆ. ಯದ್ವಾತದ್ವಾ ಶಾಲೆಗಳ ಪ್ರಾರಂಭಕ್ಕೂ ಕಡಿವಾಣ ಹಾಕಲಾಗುವುದು. ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಾಲೆ ಪ್ರಾರಂಭವಾಗಬೇಕು. ಖಾಸಗಿ ಶಾಲೆಗಳು ತಲೆ ಎತ್ತಿದ ಕಡೆ ಸರ್ಕಾರಿ ಶಾಲೆ ಮುಚ್ಚುವಂತಾಗಿದೆ ಎಂದರು.
ಸರ್ಕಾರದ ಅನುದಾನ ಒಂದೆಡೆ ಪಡೆದು, ಮತ್ತೊಂದು ಕಡೆ ಡೊನೇಷನ್ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಮತ್ತು ಶಾಲೆಗಳ ಪ್ರಮಾಣ ಎಷ್ಟಿರಬೇಕೆಂಬ ಬಗ್ಗೆ ಇಲಾಖೆ ಅಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ. ಏಕರೂಪ ಶಿಕ್ಷಣ ಜಾರಿಗೆ ತರಲು ಪಠ್ಯ ಪರಿಷ್ಕರಣೆ ನಡೆಸಲಾಗುತ್ತಿದೆ. ನಿವೃತ್ತಿ, ಮರಣ ಮತ್ತು ರಾಜೀನಾಮೆಯಿಂದ ತೆರವಾದ ಖಾಲಿ ಹುದ್ದೆಗಳ ಭರ್ತಿಗೂ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು. ಶಿಕ್ಷಣ ಕಿರಣ ಯೋಜನೆಯಡಿ ಸುಮಾರು 60 ಲಕ್ಷ ವಿದ್ಯಾರ್ಥಿಗಳ ದಾಖಲಾತಿಯನ್ನು ಅಪ್ಲೋಡ್ ಮಾಡಲಾಗಿದೆ ಎಂದರು.

ವೈದ್ಯಕೀಯ ತಪಾಸಣೆ:

ವಾರ್ಷಿಕ ಎರಡು ಬಾರಿ ಶಾಲಾ ಮಕ್ಕಳ ವೈದ್ಯಕೀಯ ತಪಾಸಣೆ ಮಾಡಲಾಗುವುದು. ಇದರಲ್ಲಿ ಖಾಸಗಿ,ಅನುದಾನಿತ ಶಾಲೆಗಳು ಒಳಗೊಂಡಿರುತ್ತವೆ ಎಂದರು. ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿದ್ದರಿಂದ ಮುಚ್ಚುವ ಹಂತದಲ್ಲಿದ್ದ 768 ಶಾಲೆಗಳನ್ನು ಪ್ರಾರಂಭಿಸಲು ಸಾಧ್ಯವಾಯಿತು ಎಂದರು.  ಸರ್ಕಾರಿ ಶಾಲೆಗಳಲ್ಲಿ ಬಡವರ ಅನುದಾನಿತ ಶಾಲೆಗಳಲ್ಲಿ ಮಧ್ಯಮವರ್ಗದವರ ಹಾಗೂ ಖಾಸಗಿ ಶಾಲೆಗಳಲ್ಲಿ ಶ್ರೀಮಂತರ ಮಕ್ಕಳು ವಿದ್ಯಾಭ್ಯಾಸ ಮಾಡುವಂತೆ ಶಿಕ್ಷಣ ವರ್ಗೀಕರಣವಾಗಿರುವುದು ಅಪಾಯಕಾರಿ ಬೆಳವಣಿಗೆ. ಇಂತಹ ವರ್ಗೀಕರಣ ಹೋಗಲಾಡಿಸುವುದು ಸರ್ಕಾರದ ಉದ್ದೇಶ ಎಂದು ತಿಳಿಸಿದರು.

ಹೊಸ ಅನುದಾನಕ್ಕೆ ಒಳಪಡಿಸುವಂತೆ ಶಾಲೆಗಳು ಬೇಡಿಕೆ ಇಟ್ಟಿವೆ. ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಿಗೆ ಆಗುತ್ತಿರುವ ತೊಂದರೆ ಗಮನಕ್ಕೆ ಬಂದಿದೆ. ಏಳೂವರೆ ಸಾವಿರ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲಾಗಿದ್ದು, 806 ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಹುದ್ದೆ ಖಾಲಿ ಇವೆ. ಬಡ್ತಿ ಮತ್ತು ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಶಿಕ್ಷಕರ ಸಮಂಜಸವಾದ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ ಎಂದು ಸ್ಪಷ್ಟಪಡಿಸಿದರು.  ಸಂಘದ ಅಧ್ಯಕ್ಷ ಡಾ.ಕೆ.ಹನುಮಂತಪ್ಪ ಬೇಡಿಕೆ ಮಂಡಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin