ಶೂನ್ಯ ಬಡ್ಡಿದರ ಬೆಳೆಸಾಲ 3 ಲಕ್ಷವಲ್ಲ, 25 ಸಾವಿರ ರೂ. ಮಾತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

Agree

ಬೆಂಗಳೂರು, ಆ.30 – ರಾಜ್ಯಾದ್ಯಂತ ರೈತರಿಗೆ 3 ಲಕ್ಷ ರೂ.ಗಳವರೆಗೆ ಶೂನ್ಯ ಬಡ್ಡಿದರದಲ್ಲಿ ಒದಗಿಸುತ್ತಿದ್ದ ಕೃಷಿ ಸಾಲವನ್ನು 25 ಸಾವಿರ ರೂ.ಗಳಿಗೆ ಮಿತಗೊಳಿಸುವಂತೆ ರಾಜ್ಯಸರ್ಕಾರ ಸಹಕಾರ ಸಂಘಗಳಿಗೆ ಮೌಖಿಕ ಸೂಚನೆ ನೀಡಿದೆ. ಕೃಷಿ ಸಾಲ ಒದಗಿಸಲು ಅಗತ್ಯವಾದ ಹಣ ಲಭ್ಯವಾಗುತ್ತಿಲ್ಲವಾದ್ದರಿಂದ ಶೂನ್ಯ ಬಡ್ಡಿದರದ ಕೃಷಿ ಸಾಲವನ್ನು ಕಡಿತಗೊಳಿಸುವಂತೆ ಕೋ ಆಪರೇಟಿವ್ ಸೊಸೈಟಿಗಳಿಗೆ ಸರ್ಕಾರ ಆದೇಶ ನೀಡಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.  ಈವರೆಗೆ ರೈತರಿಗೆ ಮೂರು ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿತ್ತು. ಈಗ 25 ಸಾವಿರ ರೂ.ಗಳಿಗೆ ಮಿತಗೊಳಿಸಿರುವುದರಿಂದ ರೈತರು ಪಡೆಯುವ ಸಾಲಕ್ಕೆ ಮತ್ತೆ ಬಡ್ಡಿ ಕಟ್ಟಬೇಕಾಗಿದೆ.

ಇದುವರೆಗೆ ಕೃಷಿ ಸಾಲಕ್ಕೆ ನಬಾರ್ಡ್ ವತಿಯಿಂದ ಶೇ.50ರಷ್ಟು ಹಣ ಲಭ್ಯವಾಗುತ್ತಿತ್ತು. ಆದರೆ ಪ್ರಸಕ್ತ ಸಾಲಿನಿಂದ ಈ ಪ್ರಮಾಣವನ್ನು ಶೇ.40ಕ್ಕೆ ಇಳಿಸುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ಆದರೆ ಪ್ರಸಕ್ತ ವರ್ಷ ರಾಜ್ಯದ ರೈತರಿಗೆ 11 ಸಾವಿರ ಕೋಟಿ ರೂ. ಕೃಷಿ ಸಾಲ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿದರೆ, ನಬಾರ್ಡ್ ಒದಗಿಸಲು ನಿರ್ಧರಿಸಿರುವುದು ಕೇವಲ 3,120 ಕೋಟಿ ರೂ. ಅಂದರೆ ರಾಜ್ಯಸರ್ಕಾರದ ನಿಗದಿತ ಗುರಿಗೆ ಹೋಲಿಸಿದರೆ ಶೇ.30ರಷ್ಟು ನೆರವನ್ನು ಮಾತ್ರ ಒದಗಿಸಲು ನಬಾರ್ಡ್ ನಿರ್ಧರಿಸಿದೆ. ಈ ಮಧ್ಯೆ ರಾಜ್ಯ ಸರ್ಕಾರ ತನ್ನದೇ ವ್ಯಾಪ್ತಿಯಲ್ಲಿರುವ ವಿವಿಧ ಇಲಾಖೆಗಳಿಂದ ಕೃಷಿ ಸಾಲ ನೀಡಲು ಅನುಕೂಲವಾಗುವಂತೆ ಲಭ್ಯವಿರುವ ಠೇವಣಿಯನ್ನು ಅಪೆಕ್ಸ್ ಬ್ಯಾಂಕ್ನಲ್ಲಿ ಠೇವಣಿ ಇಡುವಂತೆ ಸೂಚಿಸಿತ್ತು.
ಇದಕ್ಕೆ ಪೂರಕವಾಗಿ ಕಳೆದ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಈ ಸಂಬಂಧ ಕಾಯ್ದೆಯನ್ನು ಅಂಗೀಕರಿಸಿತ್ತು. ಆದರೆ ಸರ್ಕಾರದ ವಿವಿಧ ಇಲಾಖೆಗಳು ಅಪೆಕ್ಸ್ ಬ್ಯಾಂಕ್ನಲ್ಲಿ ಠೇವಣಿಯಾಗಿ ಇಡಲು ತಮ್ಮಲ್ಲಿ ಹೆಚ್ಚುವರಿ ಹಣ ಇಲ್ಲ ಎಂದು ಹೇಳಿವೆ.

ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಲಭ್ಯವಿರುವ ಹಣದಲ್ಲಿ ಶೇ.50ರಷ್ಟು ಹಣವನ್ನು ಅಪೆಕ್ಸ್ ಬ್ಯಾಂಕ್ನಲ್ಲಿ ಠೇವಣಿ ಇಡುವಂತೆ ಆದೇಶಿಸಲಾಗಿತ್ತು. ಆದರೆ 2012ರಲ್ಲಿ ಮುಜರಾಯಿ ಆಯುಕ್ತರು ಈ ರೀತಿಯ ಹಣವನ್ನು ಠೇವಣಿಯಾಗಿ ಇಡುವುದು ಬೇಡ ಎಂದು ಆದೇಶಿಸಿದ್ದಾರೆ.ಹೀಗಾಗಿ ಮುಜರಾಯಿ ದೇವಾಲಯಗಳಿಂದ ಠೇವಣಿಯಾಗಿ ಹಣವಿಡಲು ಇಲಾಖೆ ತಯಾರಿಲ್ಲ.
ಇದೇ ರೀತಿ ಸರ್ಕಾರದ ಮುಖ್ಯಕಾರ್ಯದರ್ಶಿಗಳು ವಿವಿಧ ಇಲಾಖೆಗಳಿಗೆ ಒಂದು ಸುತ್ತೋಲೆ ಹೊರಡಿಸಿ ನಿಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಅಪೆಕ್ಸ್ ಬ್ಯಾಂಕ್ನಲ್ಲಿ ಠೇವಣಿಯಾಗಿಡುವಂತೆ ಸೂಚಿಸಿದ್ದಾರೆ. ಆದರೆ ಬಹುತೇಕ ಇಲಾಖೆಗಳು ತಮ್ಮಲ್ಲಿ ವಿವಿಧ ಯೋಜನೆಗಳಿಗೆ ಸರ್ಕಾರ ಮಂಜೂರು ಮಾಡಿದ ಹಣ ಇದೆಯೇ ಹೊರತು ಹೆಚ್ಚುವರಿ ಹಣ ಇಲ್ಲ ಎಂದು ಹೇಳಿ ಕೈ ತೊಳೆದುಕೊಂಡಿವೆ.

ಹೀಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಹಣ ಲಭ್ಯವಾಗದೆ ನಬಾರ್ಡ್ ವತಿಯಿಂದಲೂ ನಿಗದಿತ ಪ್ರಮಾಣದ ಹಣ ದೊರೆಯದಿರುವುದರಿಂದ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ಗಳಲ್ಲಿ ಠೇವಣಿಯಾಗಿರುವ ಜನಸಾಮಾನ್ಯರ ಹಣವನ್ನೇ ಕೃಷಿ ಸಾಲದ ರೂಪದಲ್ಲಿ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.  ಹೀಗಾಗಿ ಶೂನ್ಯಬಡ್ಡಿದರದಲ್ಲಿ ರೈತರಿಗೆ ಒದಗಿಸುತ್ತಿರುವ ಕೃಷಿ ಸಾಲದ ಪ್ರಮಾಣವನ್ನು ಕಟ್ ಮಾಡಲು ಸರ್ಕಾರ ರಾಜ್ಯದ ಸಹಕಾರ ಸಂಘಗಳಿಗೆ ಸೂಚನೆ ನೀಡಿದೆ. ವ್ಯವಸಾಯದ ಜೊತೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸುವ ಅನಿವಾರ್ಯತೆ ಇರುವ ರೈತರಿಗೆ ಮಾತ್ರ 50 ಸಾವಿರ ರೂ.ಗಳವರೆಗೆ ಸಾಲ ನೀಡಿ, ಉಳಿದವರಿಗೆ 25 ಸಾವಿರ ರೂ.ಮಾತ್ರ ಸಾಲ ನೀಡಿ ಎಂದು ಹೇಳಿರುವುದು ತಿಳಿದುಬಂದಿದೆ.

ರಾಜ್ಯದಲ್ಲಿ ಇದುವರೆಗೆ ಆರು ಸಾವಿರ ಮಂದಿ ರೈತರಿಗೆ ಮಾತ್ರ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ. ಮಂಜೂರು ಮಾಡಲಾಗಿದೆ. ಆದರೆ ಈಗಿನ ಪರಿಸ್ಥಿತಿ ಬಿಕ್ಕಟ್ಟಿನಲ್ಲಿರುವುದರಿಂದ ಈ ಸಾಲದ ಪ್ರಮಾಣವನ್ನು ಗರಿಷ್ಠ 25 ಸಾವಿರ ರೂ.ಗಳಿಗೆ ಮಿತಗೊಳಿಸಲಾಗಿದೆ. ಈ ವರ್ಷ 11 ಸಾವಿರ ರೈತರಿಗೆ ಕೃಷಿ ಸಾಲ ನೀಡಲು ಸರ್ಕಾರ ನಿರ್ಧರಿಸಿತ್ತಾದರೂ ಈಗ ಆ ಪ್ರಮಾಣ 8 ಸಾವಿರ ಕೋಟಿ ರೂ.ಗಳಿಗೆ ಕುಸಿಯುವ ಲಕ್ಷಣಗಳು ಸ್ಪಷ್ಟವಾಗಿವೆ.  ಇದೇ ಸ್ಥಿತಿ ಮುಂದುವರೆದರೆ ಮುಂದಿನ ವರ್ಷದಿಂದ ಕೃಷಿ ಸಾಲಕ್ಕೆ ಒದಗಿಸುವ ಹಣದ ಪ್ರಮಾಣ ಕಡಿಮೆಯಾಗುತ್ತಾ ಹೋಗುವ ಆತಂಕ ಎದುರಾಗಿದೆ.  ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಂದಿ ರೈತರಿಗೆ ಕೃಷಿ ಸಾಲ ನೀಡಲಾಗಿದೆ ಎಂದು ತೋರಿಸುವ ಸಲುವಾಗಿ ಶೂನ್ಯ ಬಡ್ಡಿ ದರದ ಸಾಲವನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

► Follow us on –  Facebook / Twitter  / Google+

Facebook Comments

Sri Raghav

Admin