ಶೃತಿ ನಿಗದಿಯಂತೆ ಸಭೆಗೆ ಹೋಗಿದ್ದರೆ ಜೀವ ಉಳಿಯುತ್ತಿತ್ತೇನೋ..

ಈ ಸುದ್ದಿಯನ್ನು ಶೇರ್ ಮಾಡಿ

Shruthi-01-Amith

ನೆಲಮಂಗಲ, ಜ.14- ತಾಲ್ಲೂಕು ಪಂಚಾಯ್ತಿ ಇಒ ಕರೆದಿದ್ದ ಸಭೆಯಲ್ಲಿ ಶೃತಿಗೌಡ ಭಾಗವಹಿಸಿದ್ದರೆ ಎರಡು ಜೀವಗಳು ಉಳಿಯುತ್ತಿತ್ತೋ ಏನೋ….. ಬರ ಪರಿಸ್ಥಿತಿ ನಿಭಾಯಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿನ್ನೆ 3 ಗಂಟೆಗೆ ಸಭೆ ಕರೆದಿದ್ದರು. ಆ ಸಮಯಕ್ಕೆ ಬೇರೊಂದು ಸಭೆ ನಿಗದಿಯಾದ ಹಿನ್ನೆಲೆಯಲ್ಲಿ ಬೆಳಗ್ಗೆ 11.30ಕ್ಕೆ ಸಭೆಯನ್ನು ಮರು ನಿಗದಿ ಮಾಡಲಾಗಿತ್ತು. ಎಲ್ಲಾ ಪಿಡಿಒಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ರೈಲ್ವೆಗೊಲ್ಲಹಳ್ಳಿ ಪಂಚಾಯ್ತಿಯಲ್ಲಿ ಪಿಡಿಒ ಆಗಿದ್ದ ಶೃತಿಗೌಡ ಕೂಡ ಈ ಸಭೆಗೆ ಬರಬೇಕಿತ್ತು. ಆದರೆ, ಇದೇ ಪಂಚಾಯ್ತಿಯ ಕಾರ್ಯದರ್ಶಿಯಾಗಿದ್ದ ಹನುಮಂತೇಗೌಡ ಅವರು ಪಕ್ಕದ ಊರಿನ ಬಸವನಹಳ್ಳಿ ಪಂಚಾಯ್ತಿಯ ಪಿಡಿಒ ರಜೆ ಇದ್ದ ಹಿನ್ನೆಲೆಯಲ್ಲಿ ಪ್ರಭಾರ ಪಿಡಿಒ ಆಗಿ ಕೆಲಸ ಮಾಡುತ್ತಿದ್ದರು.

Amith-Shruthi-Firing

ಬಸವನಹಳ್ಳಿ ಪಂಚಾಯ್ತಿ ಪರವಾಗಿ ನಾನು ಸಭೆಯಲ್ಲಿ ಭಾಗವಹಿಸಬೇಕೆಂದು ಹನುಮಂತರಾಜು ಹೇಳಿದಾಗ ರೈಲ್ವೆಗೊಲ್ಲಹಳ್ಳಿ ಪಂಚಾಯ್ತಿ ಸಮಸ್ಯೆಯನ್ನೂ ನೀವೇ ವಿವರಿಸಿಬಿಡಿ ಎಂದು ಶೃತಿಗೌಡ ಸಲಹೆ ನೀಡಿದ್ದರು. ಹಬ್ಬ ಇರುವ ಕಾರಣ ನಾನು ಬೇಗ ಮನೆಗೆ ಹೋಗುತ್ತೇನೆ ಎಂದು ತಿಳಿಸಿದ್ದರು. ಪಂಚಾಯ್ತಿ ಸಿಬ್ಬಂದಿಗಳಿಗೆ ಈವರೆಗೂ ವೇತನ ಸಿಗದ ಹಿನ್ನೆಲೆಯಲ್ಲಿ ತಮ್ಮ ಸ್ವಂತ ಹಣವನ್ನೇ ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್ ಮತ್ತಿತರರಿಗೆ ಕೊಟ್ಟು ಖುಷಿಯಾಗಿ ಹಬ್ಬ ಮಾಡುವಂತೆ ಹೇಳಿದ್ದರು. ಸಭೆಗೆ ತೆರಳುವ ಮುನ್ನ ಕಾರ್ಯದರ್ಶಿ ಹನುಮಂತರಾಜು ಅವರು ವೇತನದ ಚೆಕ್ಕುಗಳನ್ನು ಕಲ್ಪತರು ಗ್ರಾಮೀಣ ಬ್ಯಾಂಕ್‍ಗೆ ಸಲ್ಲಿಸಲು ಹೋಗಿದ್ದರು. ಪಿಡಿಒ ಅವರ ಸಹಿಯಲ್ಲಿ ವ್ಯತ್ಯಾಸವಿದ್ದರಿಂದ ಬ್ಯಾಂಕ್ ಮ್ಯಾನೇಜರ್ ಮರು ಸಹಿ ಬೇಕು ಎಂದು ಹೇಳಿದ್ದರು.

ಆಗ ಸುಮಾರು ಮಧ್ಯಾಹ್ನ 2.54ರಲ್ಲಿ ಹನುಮಂತರಾಜು ಶೃತಿಗೌಡ ಅವರಿಗೆ ಕರೆ ಮಾಡಿ ಬ್ಯಾಂಕಿಗೆ ಬರುವಂತೆ ಮನವಿ ಮಾಡಿದ್ದರು. ಈಗ ಮನೆಗೆ ಹೋಗುತ್ತಿದ್ದೇನೆ. ಸೋಮವಾರ ಬಂದು ಸಹಿ ಹಾಕುತ್ತೇನೆ. ಚೆಕ್ ಪಾಸ್ ಮಾಡಲು ಬ್ಯಾಂಕ್ ಮ್ಯಾನೇಜರ್ ಬಳಿ ಮನವಿ ಮಾಡುತ್ತೇನೆ ಅವರಿಗೆ ಫೋನ್ ಕೊಡಿ ಎಂದು ಶೃತಿ ಮೊಬೈಲ್‍ನಲ್ಲೇ ಹನುಮಂತರಾಜುಗೆ ಹೇಳಿದ್ದರು.
3.46ರ ಸುಮಾರಿನಲ್ಲಿ ಬ್ಯಾಂಕ್‍ಮ್ಯಾನೇಜರ್ ಮತ್ತು ಹನುಮಂತರಾಜು ಅವರು ಸುಮಾರು 26 ಬಾರಿ ಕರೆ ಮಾಡಿದ್ದರೂ ಶೃತಿ ಫೋನ್ ತೆಗೆದಿರಲಿಲ್ಲ. ಆ ವೇಳೆಗೆ ದುರ್ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ.

ಈ ಮೊದಲು ಬಸವನಹಳ್ಳಿ, ಟಿ.ಬೇಗೂರು, ಅರೆಬೊಮ್ಮನಹಳ್ಳಿ ಪಂಚಾಯ್ತಿಗಳಲ್ಲಿ ಕೆಲಸ ಮಾಡಿದ್ದ ಶೃತಿಗೌಡ ಅವರು ಒಂದೂವರೆ ತಿಂಗಳ ಹಿಂದಷ್ಟೆ ರೈಲ್ವೆಗೊಲ್ಲಹಳ್ಳಿ ಪಂಚಾಯ್ತಿಗೆ ವರ್ಗಾವಣೆಯಾಗಿದ್ದರು. ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರು ನಿಂದಿಸಿದ್ದರು ಎಂಬ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಹನುಮಂತರಾಜು ಬೇಸರದಲ್ಲಿದ್ದಾಗ ಶೃತಿ ಅವರೇ ಸಮಾಧಾನ ಮಾಡಿದ್ದರು. ಜನಪರವಾಗಿ ಯೋಚಿಸುತ್ತಿದ್ದ ಶೃತಿ ಅವರು ತಮ್ಮ ವಿರುದ್ಧ ಚಿತಾವಣೆಗಳು ಕೇಳಿ ಬಂದಾಗ ಅಷ್ಟೇ ರೋಷಾವೇಷದಿಂದ ತಿರುಗಿ ಬೀಳುತ್ತಿದ್ದರು ಎನ್ನಲಾಗಿದೆ.
ಹಿರಿಯ ಅಧಿಕಾರಿಯೊಬ್ಬರು ಕಿರುಕುಳ ನೀಡಿದ್ದಾಗ ನಾನೂ ಕೂಡ ಕೆಎಎಸ್ ಮಾಡಿ ನಿಮ್ಮ ಸ್ಥಾನಕ್ಕೆ ಬರುತ್ತೇನೆ ಎಂದು ಸವಾಲು ಹಾಕಿದ್ದರು.

ಶೃತಿ ಮತ್ತು ರಾಜೇಶ್ ದಂಪತಿ ನಡುವೆ ಅನ್ಯೋನ್ಯ ಸಂಬಂಧವಿತ್ತು. ಮದುವೆ ನಂತರವೂ ಶೃತಿ ಎಂಎ ಮಾಡಲು ರಾಜೇಶ್ ಸಮ್ಮಿತ್ತಿಸಿದ್ದರು. ಆಕೆಗೆ ಬೈಕ್ ರೇಡಿಂಗ್ ಹವ್ಯಾಸ ಇರುವುದರಿಂದ ಆಯಾಬೂಸಾ ಬೈಕ್ ಕೊಡಿಸಿದ್ದರು.  ಯಾವುದೇ ಘಟನೆ ನಡೆದರೂ ಅದನ್ನು ಪತಿಯೊಂದಿಗೆ ಹಂಚಿಕೊಳ್ಳುತ್ತಿದ್ದರು. ನಿನ್ನೆ ಶೂಟೌಟ್‍ಗೆ ಗುರಿಯಾದ ಅಮಿತ್ ನಡವಳಿಕೆ ಕುರಿತು ಶೃತಿ ಪತಿಗೆ ಹೇಳಿದ್ದರು ಎನ್ನಲಾಗಿದೆ. ನಿನ್ನೆ ತಾಲ್ಲೂಕು ಪಂಚಾಯ್ತಿ ಸಭೆಗೆ ಹೋಗಿದ್ದರೆ ದುರ್ಘಟನೆಗೆ ಅವಕಾಶವೇ ಇರುತ್ತಿರಲಿಲ್ಲವೇನೋ. ಶೃತಿ ಮತ್ತು ಅಮಿತ್ ಆಚಾರ್ಯ ಕಾಲೇಜು ಬಳಿ ಕುಳಿತು ಮಾತನಾಡುವಾಗ ಪತಿ ರಾಜೇಶ್ ಮತ್ತು ಆಕೆಯ ಮಾವ ಗೋಪಾಲಕೃಷ್ಣ ಶೃತಿ ಕಾರಿಗೆ ಅಳವಡಿಸಿದ್ದ ಜಿಪಿಎಸ್ ಸಹಾಯದಿಂದ ಸ್ಥಳ ಗುರುತಿಸಿ ಅಲ್ಲಿಗೆ ತೆರಳಿದ್ದರು.

ಶೃತಿ ಡ್ರೈವರ್ ಸೀಟಿನಲ್ಲಿ ಕುಳಿತಿದ್ದು, ಪಕ್ಕದ ಸೀಟಿನಲ್ಲಿ ಕುಳಿತಿದ್ದ ಅಮಿತ್ ಕಾರಿನ ಗ್ಲಾಸ್ ಇಳಿಸುತ್ತಿದ್ದಂತೆ ಗುಂಡು ಹಾರಿಸಲಾಗಿದೆ. ಇದರಿಂದ ವಿಚಲಿತರಾದ ಶೃತಿ ಕಾರನ್ನು ಚಲಾಯಿಸಿಕೊಂಡು ಸಮೀಪದಲ್ಲೇ ಇದ್ದ ಸಪ್ತಗಿರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆಗ ಅಮಿತ್ ಸಾವನ್ನಪ್ಪಿದ್ದಾರೆ ಎಂದು ತಿಳಿಯುತ್ತಿದ್ದಂತೆ ಎದುರಿಗೆ ಇದ್ದ ನೇತ್ರ ಲಾಡ್ಜ್‍ಗೆ ತೆರಳಿ ಶೃತಿಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೃತಿಯನ್ನು ಫೋಲೀಸರು ಹುಡುಕುತ್ತಿದ್ದಾಗ ಜಿಪಿಎಸ್ ಸಹಾಯದಿಂದ ಪತಿ ರಾಜೇಶ್ ಅವರೇ ಕಾರು ನಿಂತಿದ್ದ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಕಾರಿಗೆ ಜಿಪಿಎಸ್ ಅಳವಡಿಸಿರುವುದು ಶೃತಿ ಅವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin