ಶೇಖರ್‍ರೆಡ್ಡಿ ಜೊತೆ ಜಯಾ ಆಪ್ತೆ ಶಶಿಕಲಾ, ಸಿಎಂ ಪನ್ನೀರ್ ಸೆಲ್ವಂಗೂ ನಂಟು : ಬಯಲಾಯ್ತು ಸ್ಫೋಟಕ ಮಾಹಿತಿ..!

ಈ ಸುದ್ದಿಯನ್ನು ಶೇರ್ ಮಾಡಿ

Sasikala-Panneer-Selvam-She

ಚೆನ್ನೈ, ಡಿ.10- ಆದಾಯ ತೆರಿಗೆ ಅಧಿಕಾರಿಗಳ ಬಲೆಗೆ ಬಿದ್ದಿರುವ ಭಾರೀ ಅಕ್ರಮದ ಪ್ರಮುಖ ಸೂತ್ರಧಾರ ಶೇಖರ್‍ರೆಡ್ಡಿ, ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮತ್ತು ಜಯಲಲಿತಾರ ಪರಮಾಪ್ತೆ ಶಶಿಕಲಾ ನಟರಾಜನ್ ಅವರ ನಡುವೆ ನಿಕಟ ಸಂಪರ್ಕವಿದೆ ಎಂಬ ಸ್ಫೋಟಕ ಮಾಹಿತಿ ಈಗ ಬಯಲಾಗಿದೆ.  ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಚೆನ್ನೈ ಮಹಾನಗರದಲ್ಲಿ ಭಾರೀ ಕಪ್ಪು ಕುಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಿಂದ ಈಗ ಒಂದೊಂದೇ ಮಹತ್ವದ ಸುಳಿವುಗಳು ಬೆಳಕಿಗೆ ಬರುತ್ತಿವೆ.

ಕಪ್ಪುಹಣದ ಸಮರ ಸಾರಿರುವ ಐಟಿ ಅಧಿಕಾರಿಗಳು ಇಂದು ಕೂಡ ಶೇಖರ್‍ರೆಡ್ಡಿಗೆ ಸೇರಿದ ಮನೆಗಳ ಮೇಲೆ ದಾಳಿ ಮುಂದುವರಿಸಿದರು. ಟಿ.ನಗರದಲ್ಲಿರುವ ರೆಡ್ಡಿ ಭವ್ಯ ಬಂಗಲೆಗೆ ಬೆಳಗ್ಗೆಯೇ ದಾಳಿ ಮಾಡಿದ ಅಧಿಕಾರಿಗಳು ದಾಖಲೆ ಪತ್ರಗಳು ಮತ್ತಿತರ ವಿವರಗಳನ್ನು ಪರಿಶೀಲಿಸಿದಾಗ ಆತನಿಗೆ ಪನ್ನೀರ್ ಸೆಲ್ವಂ ಮತ್ತು ಶಶಿಕಲಾ ನಟರಾಜನ್ ಅವರ ನಡುವೆ ನಿಕಟ ಸಂಪರ್ಕವಿರುವ ಸ್ಫೋಟಕ ಮಾಹಿತಿ ಬಯಲಾಯಿತು. ಅಲ್ಲದೆ, ತಮಿಳುನಾಡು ಸಂಪುಟದ ಹಿರಿಯ ಸಚಿವರೊಂದಿಗೂ ರೆಡ್ಡಿಗೆ ಆತ್ಮೀಯ ಒಡನಾಟವಿರುವುದು ಸಹ ಬೆಳಕಿಗೆ ಬಂದಿದೆ. ಈತ ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ರೂ. ಆಸ್ತಿ-ಪಾಸ್ತಿ ಸಂಪಾದಿಸಿದ್ದು, ಅವರ ಬಗ್ಗೆ ತನಿಖೆಯನ್ನು ಚುರುಕುಗೊಳಿಸಲಾಗಿದೆ.

ಕಳೆದ ಮೂರು ದಿನಗಳಿಂದ ಚೆನ್ನೈ ಮಹಾನಗರದ ವಿವಿಧೆಡೆ ನಡೆದ ದಾಳಿಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ ನಗದು ಮೊತ್ತ 142 ಕೋಟಿ ರೂ.ಗಳಿಗೆ ಏರಿದೆ. ಅಲ್ಲದೆ ಈವರೆಗೆ 36 ಕೋಟಿ ರೂ. ಮೌಲ್ಯದ 125 ಕೆಜಿ ಚಿನ್ನದ ಗಟ್ಟಿಗಳನ್ನು ಜಫ್ತಿ ಮಾಡಲಾಗಿದೆ.  ಇದು ಇಲ್ಲಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮೊಗೆದಷ್ಟೂ ಸಿಗುತ್ತಿದೆ. ಭಾರೀ ಪ್ರಮಾಣದ ನಗದು ಮತ್ತು ಚಿನ್ನ-ಐಟಿ ಅಧಿಕಾರಿಗಳು ಅವುಗಳನ್ನು ಎಣಿಸಿ ಎಣಿಸಿ ಸುಸ್ತಾಗುತ್ತಿದ್ದಾರೆ. ಗಂಟೆ ಗಂಟೆಗೂ ಅಕ್ರಮ ಸಂಪತ್ತಿನ ಮೊತ್ತ ಏರುತ್ತಲೇ ಇದೆ.   ಚನ್ನೈನ ಮೂವರು ಉದ್ಯಮಿಗಳ ಕಾರಸ್ಥಾನದ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಕಳೆದ 48 ಗಂಟೆಗಳಲ್ಲಿ ಪತ್ತೆಯಾಗಿರುವ ಕಾಳಧನ, ಅಕ್ರಮ ಚಿನ್ನದ ಪ್ರಮಾಣ ಕಂಡು ದೇಶವೇ ಬೆಚ್ಚಿ ಬೀಳುವಂಂತಾಗಿದೆ.

ಮೂವರು ಶಂಕಿತ ಉದ್ಯಮಿಗಳಲ್ಲಿ ಶೇಖರ್ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿಗೆ ಮರಳು ಗಣಿಗಾರಿಕೆಯಲ್ಲಿ ಭಾರೀ ದೊಡ್ಡ ಉದ್ಯಮಿದೆ. ಮೂರನೇ ವ್ಯಕ್ತಿ ಪ್ರೇಮ್ ಇವರಿಬ್ಬರ ಸಂಸ್ಥೆಗಳ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ.   ಶೇಖರ್ ರೆಡ್ಡಿ ತಿರುಪತಿಯಲ್ಲಿನ ತಿರುಮಲ ದೇವಸ್ಥಾನದ ಟ್ರಸ್ಟಿಗಳಲ್ಲಿ ಒಬ್ಬ. ಇದೆ ಕಾರಣಕ್ಕಾಗಿ ಜಯಲಲಿತಾ ಸಹಿತ ತಮಿಳುನಾಡಿನ ಹಿರಿಯ ಸಚಿವರ ನಿಕಟ ಸಂಪರ್ಕ. ಜಯಾ ಅಮೌಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶೀಘ್ರ ಗುಣಮುಖವಾಗಲೆಂದು ತಿರುಪತಿ ತಿಮ್ಮಪ್ಪನಲ್ಲಿ ಪ್ರಾರ್ಥಿಸಿ ಅಲ್ಲಿಂದ ಪ್ರಸಾದವನ್ನು ಅಮ್ಮನಿಗೆ ತಲುಪಿಸಿದ್ದ ಮಹಾನುಭಾವ ಈತ.

ಜಯಲಲಿತಾ, ಪನ್ನೀರ್ ಸೆಲ್ವಂ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಗಣ್ಯಾತಿಗಣ್ಯರು ತಿರುಪತಿಗೆ ಭೇಟಿ ನೀಡಿದಾಗಲೆಲ್ಲ ಅವರ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ ಈತ ತನ್ನ ವರ್ಚಸ್ಸು ಮತ್ತು ಪ್ರಭಾವ ಹೆಚ್ಚಿಸಿಕೊಂಡಿದ್ದ. ಅಲ್ಲದೆ, ಭಾರೀ ಪ್ರಮಾಣದ ಅಕ್ರಮ ಆಸ್ತಿ-ಪಾಸ್ತಿಗಳನ್ನು ಸಂಪಾದಿಸಿದ್ದ.  ಈಗ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin