ಶೇ.10 ರಿಂದ 15ರಷ್ಟು ಪೊಲೀಸರ ವೇತನ ಹೆಚ್ಚಳಕ್ಕೆ ಒಪ್ಪಿಗೆ
ಬೆಂಗಳೂರು, ಸೆ.1- ರಾಜದ್ಯಂತ ಪೊಲೀಸರ ವೇತನವನ್ನು ಶೇ.10 ರಿಂದ 15ರಷ್ಟು ಪ್ರಮಾಣದಲ್ಲಿ ಏರಿಕೆ ಮಾಡಲು ಸರ್ಕಾರ ಸಜ್ಜಾಗಿದೆ. ರಾಜ್ಯದಲ್ಲಿ ಸುಮಾರು ಎಪ್ಪತ್ತು ಸಾವಿರ ಪೊಲೀಸ್ ಸಿಬ್ಬಂದಿಗಳಿದ್ದು, ಇವರೆಲ್ಲರ ವೇತನವನ್ನು ಶೇ.10 ರಿಂದ 15ರಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿರುವ ಪರಮೇಶ್ವರ್ ಸದ್ಯದ ನಿರ್ಣಾಯಕ ಸಭೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಆರ್ಥಿಕ ಇಲಾಖೆ ಪ್ರಮುಖರ ಜತೆ ನಡೆಸಲು ನಿರ್ಧರಿಸಿದ್ದಾರೆ.
ಈ ತಿಂಗಳ ಮಧ್ಯಭಾಗ ಅಥವಾ ತಿಂಗಳಾಂತ್ಯದ ವೇಳೆಗೆ ಪರಮೇಶ್ವರ್ ಅವರು ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಿದ್ದು, ಗಾಂಧಿ ಜಯಂತಿ ವೇಳೆಗೆ ಪೋಲೀಸರ ವೇತನ ಹೆಚ್ಚಳವಾಗಲಿದೆ ಎಂದು ಗೃಹ ಇಲಾಖೆ ಮೂಲಗಳು ಖಚಿತಪಡಿಸಿವೆ. ಇತ್ತೀಚೆಗೆ ಪೊಲೀಸರು ವೇತನ ಹೆಚ್ಚಳವೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ದಂಗೆ ಎಬ್ಬಿಸಲು ಅಣಿಯಾಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಆದರೆ, ಪೋಲೀಸರ ದಂಗೆಯನ್ನು ಕಟ್ಟು ನಿಟ್ಟಾಗಿ ನಿಯಂತ್ರಿಸಿದ ಸರ್ಕಾರ ಇಂತಹ ಬೆಳವಣಿಗೆಗೆ ಕಾರಣರಾದವರನ್ನು ಬಂಧಿಸಿ ಜೈಲಿಗಟ್ಟಿತ್ತಲ್ಲದೆ ಏನೇ ಬೇಡಿಕೆಗಳಿದ್ದರೂ ಅದನ್ನು ಸರ್ಕಾರದ ಮುಂದಿಡಬೇಕೇ ಹೊರತು ಪೋಲೀಸ್ ದಂಗೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಮನವಾಗಿದ್ದಲ್ಲದೆ ತಮ್ಮ ಬೇಡಿಕೆಗಳ ವಿವರವನ್ನು ಗೃಹ ಸಚಿವರಿಗೆ ನೀಡಿ ಮಾನವೀಯತೆಯ ದೃಷ್ಟಿಯಿಂದ ಇದನ್ನು ಪರಿಶೀಲಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿಯೇ ನಿರಂತರವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿರುವ ಗೃಹ ಸಚಿವ ಪರಮೇಶ್ವರ್ ಇದೀಗ ಪೋಲೀಸರಿಗೆ ಶೇ.10 ರಿಂದ 15 ರಷ್ಟು ವೇತನ ಹೆಚ್ಚಳ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಐಪಿಎಸ್ ಸೇರಿದಂತೆ ಎಲ್ಲ ಹಂತದ ಪೊಲೀಸರು ಸೇರಿ 70 ಸಾವಿರ ಮಂದಿ ಸಿಬ್ಬಂದಿಗಳಿದ್ದು, ಈ ಹಿನ್ನೆಲೆಯಲ್ಲಿ ಬೊಕ್ಕಸಕ್ಕಾಗುವ ಹೊರೆಯ ಕುರಿತು ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳು ಹಾಗೂ ಆರ್ಥಿಕ ಇಲಾಖೆ ಕೈಗೊಳ್ಳಬೇಕಿರುವು ದರಿಂದ ಅಂತಿಮ ಸುತ್ತಿನ ಮಾತುಕತೆಯನ್ನು ಅವರೊಂದಿಗೆ ನಡೆಸಲಿದ್ದಾರೆ.
ಈ ಸಭೆ ನಂತರ ಪೊಲೀಸರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶ ಹೊರಬೀಳಲಿದ್ದು,ಅ.2ರಂದು ನಡೆಯುವ ಗಾಂಧಿ ಜಯಂತಿಯ ವೇಳೆಗೆ ಪೊಲೀಸರ ವೇತನ ಹೆಚ್ಚಾಗಲಿದೆ. ಪೋಲೀಸರ ಮೂಲ ವೇತನದಲ್ಲಿ ಶೇ.10 ರಿಂದ 15 ರಷ್ಟು ಹೆಚ್ಚಳವಾಗಲಿದೆ. ಇದೇ ರೀತಿ ರಾಜ್ಯದಲ್ಲಿ ಖಾಲಿಯಿರುವ 25 ಸಾವಿರ ಹುದ್ದಾಗಳನ್ನು ಭರ್ತಿ ಮಾಡಲು ಸರ್ಕಾರ ತೀರ್ಮಾನಿಸಿದ್ದು, 7000 ಕಾನ್ಸ್ಟೆಬಲ್ಗಳು ಹಾಗೂ 590 ಸಬ್ ಇನ್ಸ್ಪೆಕ್ಟರ್ಗಳ ನೇಮಕಾತಿ ಸಂಬಂಧ ಒಂದೆರಡು ದಿನಗಳಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಲಿದೆ ಎಂದು ಮೂಲಗಳು ವಿವರ ನೀಡಿವೆ. ಈ ಮಧ್ಯೆ ಈಗಾಗಲೇ ತರಬೇತಿಯಲ್ಲಿರುವ ಸಹಸ್ರಾರು ಮಂದಿ ಪೊಲೀಸ್ ಸಿಬ್ಬಂದಿಗಳು ಸದ್ಯದ ಸೇವೆಗೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ಸ್ಪಷ್ಟ ಪಡಿಸಿವೆ.
► Follow us on – Facebook / Twitter / Google+