ಶೇ. 90ರಷ್ಟು ಪಠ್ಯಪುಸ್ತಕಗಳು ಶಾಲೆಗಳಿಗೆ ತಲುಪಿವೆ : ತನ್ವೀರ್ ಸೇಠ್

ಈ ಸುದ್ದಿಯನ್ನು ಶೇರ್ ಮಾಡಿ

Tanveer-Sait

ಬೆಂಗಳೂರು, ಜೂ.14– ಪಠ್ಯ ಪುಸ್ತಕ ಮುದ್ರಣದಲ್ಲಿ ಯಾವುದೇ ವಿಳಂಬ ಆಗಿಲ್ಲ. ಈಗಾಗಲೇ ಶೇ.97ರಷ್ಟು ಮುದ್ರಣ ಕಾರ್ಯ ಪೂರ್ಣಗೊಂಡಿದೆ. ಶೇ.90ರಷ್ಟು ಪುಸ್ತಕಗಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸ್ಪಷ್ಟಪಡಿಸಿದರು. ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಸ್ತಾಪಿಸಿದ  ವಿಷಯಕ್ಕೆ ಉತ್ತರ ನೀಡಿದ ತನ್ವೀರ್ ಸೇಠ್ ಅವರು ಪಠ್ಯ ಪುಸ್ತಕ ಮುದ್ರಣದಲ್ಲಿ ವಿಳಂಬ ಆಗಿದೆ ಎಂಬುದು ನಿರಾಧಾರ. ಮುದ್ರಣಕ್ಕೆ 72 ಟೆಂಡರ್ ಪ್ರಕ್ರಿಯೆ ನಡೆಸಿ ಗುತ್ತಿಗೆಗೆ ನೀಡಲಾಗಿದೆ ಎಂದು ಹೇಳಿದರು.

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾಗದ ಉತ್ಪಾದನೆಯ ಮೂರು ಕಾರ್ಖಾನೆಗಳು ಮುಚ್ಚಿ ಹೋಗಿದ್ದವು. ಸರ್ಕಾರ ನ್ಯಾಷನಲ್ ಪೇಪರ್ ಮಿಲ್ಸ್ ಜತೆ ಮಾತನಾಡಿ, ಮುದ್ರಣ ಕಾಗದ ಒದಗಿಸಿದೆ. ಮುದ್ರಕರಿಗೆ ಪೇಪರ್ ಖರೀದಿಗೆ ಮುಂಗಡ ಹಣ ನೀಡಿರುವುದರಲ್ಲಿ ನಿಯಮಾವಳಿ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.  ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಲೆ ಪ್ರಾರಂಭವಾಗುವ ವೇಳೆಗೆ ಪಠ್ಯ ಪುಸ್ತಕ, ಸೈಕಲ್, ಸಮವಸ್ತ್ರ ಮತ್ತು ಶೂಗಳನ್ನು ಪೂರೈಸಲಾಗಿದೆ ಎಂದು ಹೇಳಿದರು.

ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ಸ್ವಲ್ಪ ಗೊಂದಲ ಆಗಿದ್ದು ನಿಜ. ಆದರೆ, ಮುದ್ರಣದಲ್ಲಿ ಯಾವುದೇ ವಿಳಂಬ ಆಗಿಲ್ಲ. ಈಗಾಗಲೇ ಶೇ.97ರಷ್ಟು ಕೆಲಸ ಪೂರ್ಣಗೊಂಡಿದೆ. ಶೇ.90ರಷ್ಟು ಪುಸ್ತಕ ಪೂರೈಕೆಯೂ ಆಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಪುಸ್ತಕ ಹಂಚಿಕೆಯ ಕೆಲಸವೂ ನಡೆಯುತ್ತಿದೆ. ವಿಶ್ವೇಶ್ವರ ಹೆಗಡೆ ಕಾಗೇರಿಯವರ ಜಿಲ್ಲೆಯಾದ ಉತ್ತರ ಕನ್ನಡಕ್ಕೆ ಶೇ.100ರಷ್ಟು ಪಠ್ಯ ಪುಸ್ತಕ ಪೂರೈಸಿರುವ ದಾಖಲೆ ನನ್ನ ಬಳಿ ಇದೆ ಎಂದು ಹೇಳಿದರು.
ಒಂದರಿಂದ ಎಂಟನೆ ತರಗತಿವರೆಗೆ ಪಠ್ಯ ಪುಸ್ತಕ ಪರಿಷ್ಕರಣೆ ಆಗಿದೆ. ಆದರೆ, ಅದರಿಂದಲೂ ಮುದ್ರಣದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸ್ಪಷ್ಟಪಡಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ನನ್ನ ಕ್ಷೇತ್ರಕ್ಕೆ ಶೇ.50ರಷ್ಟು ಪಠ್ಯಪುಸ್ತಕ ತಲುಪಿಲ್ಲ. ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ನಾನು ಇನ್ನೊಂದು ಬಾರಿ ಚರ್ಚಿಸುತ್ತೇನೆ. ಸದ್ಯಕ್ಕೆ ಪಠ್ಯ ಪುಸ್ತಕ ಪೂರೈಕೆ ಬಗ್ಗೆ ಉತ್ತರ ನೀಡಿ ಎಂದು ಸಚಿವರನ್ನು ಒತ್ತಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin