ಶೋಕಿಲಾಲ ನೀರವ್ ಮೋದಿ ಪಿಎನ್ಬಿ ವಂಚಿಸಿದ್ದು 11,400 ಕೋಟಿ ಅಲ್ಲ 12,723 ಕೋಟಿ..!
ನವದೆಹಲಿ, ಫೆ.27-ಭಾರತೀಯ ವ್ಯಾಂಕಿಂಗ್ ವಲಯವನ್ನು ಬೆಚ್ಚಿಬೀಳಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಹಗರಣದ ಅಳ ಮತ್ತು ವ್ಯಾಪ್ತಿ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಈ ವಂಚನೆ ಪ್ರಕರಣದಲ್ಲಿ 11,400 ಕೋಟಿ ರೂ.ಗಳ ಅಕ್ರಮ-ಅವ್ಯವಹಾರ ನಡೆದಿರುವುದು ಪತ್ತೆಯಾದ ಬೆನ್ನಲ್ಲೇ, ಮತ್ತೆ 1,323 ಕೋಟಿ ರೂ.ಗಳ ಹೊಸ ದೋಖ ಬೆಳಕಿಗೆ ಬಂದಿದ್ದು, ಈ ಹಗರಣದ ಮೊತ್ತ 12,723 ಕೋಟಿ ರೂ.ಗಳಿಗೆ ಏರಿದೆ. ಪಿಎನ್ಬಿ ಹಗರಣದ ಬಗ್ಗೆ ಕೇಂದ್ರೀಯ ತನಿಖಾ ದಳ(ಸಿಬಿಐ), ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಜಾರಿ ನಿರ್ದೇಶನಾಲಯ(ಇಡಿ) ತನಿಖೆ ತೀವ್ರಗೊಳಿಸಿದ್ದು, ದಿನಕ್ಕೊಂದು ಹೊಸ ವಂಚನೆ ಮತ್ತು ಅಕ್ರಮಗಳು ಬಹಿರಂಗವಾಗುತ್ತಿದೆ.
ಡೈಮಂಡ್ ಕಿಂಗ್ ಮತ್ತು ಶೋಕಿಲಾಲ್ ನೀರವ್ ಮೋದಿ ಎಸಗಿದ್ದ ವಂಚನೆ ಹಗರಣ ಫೆ.14ರಂದು ಬೆಳಕಿಗೆ ಬರುತ್ತಲೇ ಬ್ಯಾಂಕಿಂಗ್ ಕ್ಷೇತ್ರ ತಲ್ಲಣಗೊಂಡಿತ್ತು. ಆಗ 11,400 ಕೋಟಿ ರೂ. ಮೊತ್ತದ ಅಕ್ರಮ ವ್ಯವಹಾರ ಪತ್ತೆಯಾಗಿತ್ತು. ಈಗ ಇನ್ನೂ 1,323 ಕೋಟಿ ರೂ.ಗಳ ವಂಚನೆಯಾಗಿದೆ ಎಂದು ತಿಳಿಸಿದೆ. ನಿನ್ನೆ ರಾತ್ರಿ ಪಿಎನ್ಬಿ ಈ ಸಂಬಂಧ ಬಾಂಬೆ ಸ್ಟಾಕ್ ಎಕ್ಸ್ಚೈಂಜ್(ಬಿಎಸ್ಇ)ಗೆ ಮನವಿಯೊಂದನ್ನು ಸಲ್ಲಿಸಿದ್ದು, 204.25 ದಶಲಕ್ಷ ಡಾಲರ್ (1,323 ಕೋಟಿ ರೂ.ಗಳು) ಅನಧಿಕೃತ ವ್ಯವಹಾರಗದ ಮೂಲಕ ತನಗೆ ವಂಚಿಸಲಾಗಿದೆ ಎಂದು ತಿಳಿಸಿದೆ.