‘ಶೋಭಾ ಕರಂದ್ಲಾಜೆಯವರಿಂದ ಸಚಿವ ಆಂಜನೇಯರ ಹೆಸರಿಗೆ ಮಸಿ ಬಳಿಯುವ ಯತ್ನ’

ಈ ಸುದ್ದಿಯನ್ನು ಶೇರ್ ಮಾಡಿ

SHobha-Anjaneya--01

ಬೆಂಗಳೂರು, ಫೆ.27- ಸಚಿವ ಆಂಜನೇಯ ಅವರು ಹಿಂದುಳಿದ ಜಾತಿಗಳಿಗೆ ಹಾಗೂ ದಲಿತರಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವ ಮೂಲಕ ಶೋಷಿತ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ಸಹಿಸದೆ ಅವರ ಚಾರಿತ್ರ್ಯ ವಧೆ ಮಾಡಲು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಯತ್ನಿಸುತ್ತಿರುವುದನ್ನು ದಲಿತ ಮುಖಂಡರು ಖಂಡಿಸಿದ್ದಾರೆ. ಮಾವಳ್ಳಿ ಶಂಕರ್, ಲಕ್ಷ್ಮಿನಾರಾಯಣ್ ನಾಗಾವರ, ಸಿದ್ದರಾಜು, ಶ್ರೀಧರ್ ಕಲಿವೀರ, ಎನ್.ಮುನಿಸ್ವಾಮಿ, ಕೆ.ಚಂದ್ರಶೇಖರ್, ತಿಮ್ಮಯ್ಯ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂತ್ರಿಗಳಾದವರು ತಮ್ಮ ಸ್ವಂತ ಕ್ಷೇತ್ರಗಳಿಗೆ ಹೆಚ್ಚಿನ ಸರ್ಕಾರಿ ಅನುದಾನ ನೀಡುವುದು ಹೊಸ ವಿಚಾರವೇನಲ್ಲ. ಎಲ್ಲ ಸಚಿವರೂ ಇದನ್ನು ಮಾಡುತ್ತಾರೆ. ಶೋಭಾ ಕರಂದ್ಲಾಜೆ ಕೂಡ ಸಚಿವೆಯಾಗಿದ್ದಾಗ ಅವರು ಪ್ರತಿನಿಧಿಸುತ್ತಿದ್ದ ಯಶವಂತಪುರ ಕ್ಷೇತ್ರಕ್ಕೆ ಸರ್ಕಾರಿ ಅನುದಾನದ ಹೊಳೆಯನ್ನೇ ಹರಿಸಿದ್ದರು.

ಇದಾವುದರ ಬಗ್ಗೆಯೂ ಚಕಾರವೆತ್ತದೆ ಶೋಭಾ ಕರಂದ್ಲಾಜೆ ಅವರು ಆಂಜನೇಯ ಅವರ ಸ್ವಂತ ಹೊಳಲ್ಕೆರೆ ಕ್ಷೇತ್ರಕ್ಕೆ ಜನರ ಬೇಡಿಕೆಗೆ ಸ್ಪಂದಿಸಿ ಸ್ವಲ್ಪ ಹೆಚ್ಚಿನ ಕೊಳವೆ ಬಾವಿಗಳನ್ನು ಮಂಜೂರು ಮಾಡಿರುವುದನ್ನೇ ದೊಡ್ಡದು ಮಾಡಿ ಆರೋಪಿಸಿರುವ ಕ್ರಮ ಖಂಡನೀಯ ಎಂದು ಅವರು ಹೇಳಿದ್ದಾರೆ.
ಚುನಾವಣಾ ನೀತಿ-ಸಂಹಿತೆ ಸದ್ಯದಲ್ಲೇ ಜಾರಿಯಾಗುತ್ತಿರುವುದರಿಂದ ಮಾರ್ಚ್ ಅಂತ್ಯದೊಳಗೆ ಕೊಳವೆ ಬಾವಿ ಕೊರೆಸುವ ಮೂಲಕ ದಲಿತರ ಕಲ್ಯಾಣಕ್ಕಾಗಿ ಮಂಜೂರಾಗಿರುವ ಹಣ ಲ್ಯಾಪ್ಸ್ ಆಗದಂತೆ ಸದುಪಯೋಗವಾಗುವ ಉದ್ದೇಶದಿಂದ ರಾಜ್ಯಾದ್ಯಂತ 34 ಸಾವಿರ ಕೊಳವೆ ಬಾವಿಗಳ ನಿರ್ಮಾಣಕ್ಕೆ ಆದೇಶ ಹೊರಡಿಸಿರುವ ಆಂಜನೇಯ ಅವರ ಜನಪರ ಕಾಳಜಿಯನ್ನು ಮೆಚ್ಚಬೇಕು. ಆದರೆ, ಶೋಭಾ ಕರಂದ್ಲಾಜೆ ಅವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಧಾರವಿಲ್ಲದ ಸುಳ್ಳು ಆರೋಪ ಮಾಡಿ ಆಂಜನೇಯ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ದುರುದ್ದೇಶದಿಂದ ಇಂತಹ ಸುಳ್ಳು ಆರೋಪ ಮಾಡುವುದು ಬಿಜೆಪಿಗೆ ತಿರುಗುಬಾಣವಾಗುತ್ತದೆ. ಇದನ್ನು ವಿರೋಧಿಸಿ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ಮಾಡುವುದು ನಮಗೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Facebook Comments

Sri Raghav

Admin