ಶೋಭಾ ಭಯೋತ್ಪಾದಕಿ, ಬಿಜೆಪಿ-ಆರ್‍ಎಸ್‍ಎಸ್-ಭಜರಂಗದಳದವರೇ ಉಗ್ರಗಾಮಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-vs-Shobha-kara

ಚಾಮರಾಜನಗರ, ಜ.10-ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿ, ಆರ್‍ಎಸ್‍ಎಸ್, ಭಜರಂಗದಳದವರೇ ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳಿಗಾಗಿ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ನಾಗವಳ್ಳಿ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ,ಆರ್‍ಎಸ್‍ಎಸ್, ಭಜರಂಗದಳದವರೇ ಉಗ್ರಗಾಮಿಗಳು. ಅಂಥವರಿಗೆ ನಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಹೊಂದಿಲ್ಲ ಎಂದು ಹರಿಹಾಯ್ದರು. ಕೋಮು ಸಾಮರಸ್ಯಕ್ಕೆ ಧಕ್ಕೆ ತರುವುದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕೋಮುವಾದಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ರಾಜ್ಯದಲ್ಲಿ ಶಾಂತಿ ಕದಡಲು ಬಿಡುವುದಿಲ್ಲ ಎಂದು ಹೇಳಿದರು. ರುದ್ರೇಶ್ ಹತ್ಯೆಯ ಹಿಂದೆ ಪಿಎಫ್‍ಐ ನಂಟಿರುವ ಬಗ್ಗೆ ಅನುಮಾನವಿದೆ. ಆದರೆ ಈ ಬಗ್ಗೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಮಾಹಿತಿ ಕಲೆ ಹಾಕಲಾಗುತ್ತಿದ್ದು, ಎಲ್ಲವನ್ನೂ ಪರಿಶೀಲಿಸಿ ನಂತರ ಕ್ರಮಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶೋಭಾ ಭಯೋತ್ಪಾದಕಿ:

ಆನಂದ್‍ರಾವ್ ವೃತ್ತದಲ್ಲಿ ಧನ್ಯಶ್ರೀ ಮೇಲೆ ನಡೆದ ಲೈಂಗಿಕ ದೌರ್ಜನ್ಯ ವಿರೋಧಿಸಿ ಎನ್‍ಎಸ್‍ಯುಐ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಮಾತನಾಡಿ, ಸಮಾಜದ ಶಾಂತಿ ಕದಡುತ್ತಿರುವ ಶೋಭಾ ಕರಂದ್ಲಾಜೆ, ಅನಂತ್‍ಕುಮಾರ್ ಹೆಗಡೆ ಭಯೋತ್ಪಾದಕರಲ್ಲವೇ ಎಂದು ಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಮೊದಲು ಆರ್‍ಎಸ್‍ಎಸ್ ಸಂಘಟನೆಯನ್ನು ನಿಷೇಧಿಸಬೇಕು. ನಿಜವಾದ ಜಿಹಾದಿಗಳೇ ಅವರು ಎಂದು ಆರೋಪಿಸಿದರು. ಲೈಂಗಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಧನ್ಯಶ್ರೀ ಬಗ್ಗೆ ಮಾತನಾಡದ ಶೋಭಾಕರಂದ್ಲಾಜೆ, ಯಾವ ಸಿದ್ಧಾಂತದಲ್ಲಿದ್ದಾರೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಹಿಂದು ಸಂಘಟನೆ ಹೆಸರಿನಲ್ಲಿ ಸಮಾಜದ ಶಾಂತಿ ಕದಡುವವರು ಭಯೋತ್ಪಾದಕರಲ್ಲದೆ ಬೇರೇನು ಎಂದು ಪ್ರಶ್ನಿಸಿದರು.

Facebook Comments

Sri Raghav

Admin