ಶೌಚಾಲಯದ ದುಡ್ಡು ತಿಂದ ಬಿಬಿಎಂಪಿ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

BBMP--Toilets

ಬೆಂಗಳೂರು, ಫೆ.27- ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಸ್ವಚ್ಛ ಭಾರತ್ ಯೋಜನೆಯಡಿ ಬಿಡುಗಡೆಯಾಗಿದ್ದ 155 ಕೋಟಿ ಅನುದಾನದಲ್ಲಿ 110 ಕೋಟಿ ರೂ.ಗಳಷ್ಟು ಅವ್ಯವಹಾರವಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಬಿಬಿಎಂಪಿ ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ ಇಡೀ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆ ಜಾರಿಗಾಗಿ ಪಾಲಿಕೆಗೆ 154.98 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನವನ್ನು ಸಾರ್ವಜನಿಕ ಶೌಚಾಲಯ ನಿರ್ಮಾಣ, ಅದಕ್ಕೆ ಸಂಬಂಧಪಟ್ಟಂತೆ ಬೋರ್‍ವೆಲ್ ಕೊರೆಸಲು ಹಾಗೂ ಇತರೆ ಸೌಕರ್ಯಕ್ಕೆ ಬಳಕೆ ಮಾಡಬೇಕೆಂಬ ಮಾನದಂಡವಿದೆ. ಆದರೆ, ಬಿಬಿಎಂಪಿಯಲ್ಲಿ ಸ್ವಚ್ಛ ಭಾರತ್ ಯೋಜನೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತಮಗಿಷ್ಟಬಂದ ಕಾಮಗಾರಿಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ದೂರಿದರು.

ಸಹ ಮುಖ್ಯ ಆರ್ಥಿಕಾಧಿಕಾರಿ ಹಾಗೂ ಮುಖ್ಯ ಲೆಕ್ಕಾಧಿಕಾರಿಗಳು ಮನಬಂದಂತೆ ಹಣ ಬಿಡುಗಡೆ ಮಾಡುತ್ತಿದ್ದಾರೆ. ಅಲ್ಲದೆ ಜಾಬ್‍ಕೋಡ್ ನೀಡಿದ್ದಾರೆ ಎಂದು ಆರೋಪಿಸಿದರು. ಸ್ವಚ್ಛ ಭಾರತ ಯೋಜನೆ ಬಿಬಿಎಂಪಿ ವ್ಯಾಪ್ತಿಗೆ ಮೀಸಲು ಎಂದಿದ್ದರೂ ಹೊರವಲಯದ ಗ್ರಾಮೀಣ ಪ್ರದೇಶಗಳಿಗೂ ಹಣ ಬಳಕೆ ಮಾಡಲಾಗಿದೆ. ಒಟ್ಟಾರೆ 155 ಕೋಟಿ ಅನುದಾನದಲ್ಲಿ 110ಕೋಟಿಯಷ್ಟು ಅವ್ಯವಹಾರವಾಗಿದೆ. ಇದರಲ್ಲಿ ಲೆಕ್ಕಾಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಎಇಇಗಳು ಶಾಮೀಲಾಗಿದ್ದಾರೆ ಎಂದು ದೂರಿದರು.

ಸ್ವಚ್ಛಭಾರತ ಯೋಜನೆಯಡಿ ಸೆಮಿಟಾಯ್ಲೆಟ್ ಬಳಕೆ ಮಾಡಬೇಕಾದ ಅನುದಾನವನ್ನು ರಸ್ತೆ ಡಾಂಬರಿಕರಣ, ಲ್ಯಾಂಡ್‍ಫಿಲ್ ಸೈಟ್‍ನಲ್ಲಿ ಆಟದ ಮೈದಾನ, ಒಳಚರಂಡಿ, ಕಟ್ಟಡಗಳಿಗೆ ಸುಣ್ಣ ಬಳಿಯಲು, ಅಂಬೇಡ್ಕರ್ ಭವನ ನಿರ್ಮಾಣ, ಗ್ರಾಮ ಪಂಚಾಯ್ತಿ ಕಚೇರಿ ಕಟ್ಟಡ ನಿರ್ಮಾಣ, ಸ್ಮಶಾನದ ಗೋಡೆ ನಿರ್ಮಾಣ, ಪಾರ್ಕ್ ಅಭಿವೃದ್ಧಿ ಹೀಗೆ ಹಲವಾರು ಕಾಮಗಾರಿಗಳಿಗೆ ಹಣ ದುರ್ಬಳಕೆ ಮಾಡಲಾಗಿದೆ ಎಂಬುದನ್ನು ಅಂಕಿ-ಅಂಶಗಳ ಸಹಿತ ವಿವರಿಸಿದರು.
ಈ ಎಲ್ಲ ಹಣ ಬೇರೆ ಕಾಮಗಾರಿಗಳಿಗೆ ಬಳಕೆ ಮಾಡಿರುವ ಪೂರ್ಣ ದಾಖಲೆಯನ್ನು ಬಿಬಿಎಂಪಿ ಆಯುಕ್ತರಿಗೆ ಕೊಡುತ್ತಿದ್ದೇನೆ. ತಕ್ಷಣ ಆಯುಕ್ತರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ನೇತ್ರ ನಾರಾಯಣ್ ಆಗ್ರಹಿಸಿದರು.

Facebook Comments

Sri Raghav

Admin