ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ವರ ನೀಡದೆ ಇರಳು ವರಮಹಾಲಕ್ಷ್ಮಿ

ಈ ಸುದ್ದಿಯನ್ನು ಶೇರ್ ಮಾಡಿ

varamahalakshmi

– ಮುನಿರಾಜ ಎಂ. ಚೌಡದೇವನಹಳ್ಳಿ

ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಹೆಣ್ಣು ಮಕ್ಕಳಿಗಂತೂ ಪ್ರಿಯವಾದ ಮಾಸ. ಪ್ರತಿಯೊಂದು ಹಬ್ಬದಲ್ಲೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಖುಷಿ ಪಡುತ್ತಾರೆ. ಈ ಎಲ್ಲ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಎಂದರೆ ಎಲ್ಲರಿಗೂ ಬಹಳ ಪ್ರಿಯವಾದುದು. ವರಗಳನ್ನು ದಯಪಾಲಿಸುವುದರಿಂದ ಆಕೆಯನ್ನು ವರಮಹಾಲಕ್ಷ್ಮಿ ಎಂದು ಕರೆಯುವರು. ಪ್ರತಿ ವರ್ಷ ಪೌರ್ಣಮಿ ಸಮೀಪದ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ಈ ವರಮಹಾಲಕ್ಷ್ಮಿ ವ್ರತವನ್ನು ಎಲ್ಲಾ ಮುತ್ತೈದೆಯರು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ.

ಪುರಾಣದ ಪ್ರಕಾರ ಲಕ್ಷ್ಮಿಯು ಕ್ಷೀರಸಾಗರದಿಂದ ಅವತಾರ ತಾಳಿದಳೆಂದು ಹೇಳಲಾಗುತ್ತದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದರ ಪರ್ವತವನ್ನು ಕಡೆಯುತ್ತಿದ್ದಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಉದ್ಭವಿಸಿದವಳು ಲಕ್ಷ್ಮೀ, ಹಾಗಾಗಿ ಈ ವರಮಹಾಲಕ್ಷ್ಮಿ ವ್ರತದ ದಿನ ತಾಯಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ. ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿರುವುದರಿಂದ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ ರಂಗೋಲಿ, ತಳಿರು, ತೋರಣಗಳಿಂದ ಅಲಂಕರಿಸಿ ಅಭ್ಯಂಜನವನ್ನು ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ.

ನಿತ್ಯ ಶುದ್ಧ, ಸ್ವರೂಪಗಳೂ ಆದ ಈ ಮಂಗಳ ದೇವತೆಯ ಮಹಿಮೆಯನ್ನು ವರ್ಣಿಸುವ ಶಾಸ್ತ್ರಗಳಲ್ಲೇ ಆಕೆಯನ್ನು ಕ್ಷೀರ ಸಮುದ್ರ ಸಂಭವೆ, ಸಮುದ್ರರಾಜನ ಪುತ್ರಿ, ಚಂದ್ರನ ತಂಗಿ, ಯಜ್ಞಕುಂಡದಲ್ಲಿ ಉದ್ಬವವಾದವಳು, ಕಮಲದಲ್ಲಿ ಆವಿರ್ಭಸಿದವಳು ಇತ್ಯಾದಿ ಹೆಸರುಗಳಿಂದ ಕರೆಯುವುದನ್ನು ಕಾಣುತ್ತೇವೆ.
ಸಣ್ಣ ತಾಮ್ರದ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಳಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಿ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಳಶವನ್ನು ಇಟ್ಟು ಮಾವಿನ ಎಲೆ ಅಥವಾ ವೀಳ್ಯದೆಲೆಯನ್ನು ಕಳಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿನ ಹಚ್ಚಿದ ತೆಂಗಿನಕಾಯಿನ್ನು ಇಟ್ಟು ಅದಕ್ಕೆ ಸೀರೆ, ಒಡವೆಗಳೊಂದಿಗೆ ಅಲಂಕರಿಸುವುದು ಒಂದು ವಿಶೇಷವೇ ಸರಿ.

ಅವರವರ ಶಕ್ತ್ಯಾನುಸಾರ ಲಕ್ಷ್ಮಿಯನ್ನು ಚಿನ್ನ, ಬೆಳ್ಳಿ, ಹೂವುಗಳೊಂದಿಗೆ ಅಲಂಕರಿಸಿ ಪೂಜಿಸುತ್ತಾರೆ. ಲಕ್ಷ್ಮೀ ತಾಯಿಗೆ ಹೂವುಗಳೆಂದರೆ ಬಹಳ ಪ್ರೀತಿ, ಅದರಲ್ಲೂ ಕಮಲದ ಹೂವು ಹಾಗೂ ಕನಕಾಂಬರ ಬಿಲ್ವಪತ್ರೆ ಎಂದರೆ ತಾಯಿಗೆ ತುಂಬಾ ಪ್ರೀತಿ. ಬಿಲ್ವವೃಕ್ಷದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆಂದು ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ತಾಯಿ ಒಲಿಯುವಳೆಂಬ ನಂಬಿಕೆಯೂ ಇದೆ.  ಸಾಮಾನ್ಯವಾಗಿ ಲಕ್ಷ್ಮೀಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಶ್ರೇಷ್ಠ ಎನ್ನುವುದು ನಂಬಿಕೆ. ಆದರೆ, ಆಧುನಿಕ ಜೀವನದ ಒತ್ತಡದಲ್ಲಿ ಯಾರಿಗೂ ಉಪವಾಸ ಮಾಡಲು ಸಾಧ್ಯವಾಗದೆ ಇರುವುದರಿಂದ ಮುಂಜಾನೆಯಲ್ಲಿ ಯಾವುದೇ ಆಹಾರ ಸೇವಿಸದೆ ವ್ರತವನ್ನಾಚರಿಸುತ್ತಾರೆ. ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದು ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆಯಾಗುತ್ತದೆಂಬ ನಂಬಿಕೆಯಿದೆ.

ಹೀಗಾಗಿ ನಮ್ಮ ಪೂರ್ವಿಕರು ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮಿಯು ತಾಂಡವ ವಾಡುತ್ತಾಳೆ ಎಂದು ಹೇಳುತ್ತಾರೆ. ಎಲ್ಲದಕ್ಕಿಂತ ಇಲ್ಲಿ ಶ್ರದ್ಧೆ ಹಾಗೂ ಭಕ್ತಿ ಮುಖ್ಯವಾಗಿದೆ. ವರಮಹಾಲಕ್ಷ್ಮಿ ವ್ರತದಲ್ಲಿ ವಿಶೇಷವಾಗಿ ದಾರಗಳಿಗೆ ಪೂಜೆಯನ್ನು ಸಲ್ಲಿಸುವರು. ಈ ದಾರವನ್ನು ಹೊಸದಾದ ದಾರಗಳಿಗೆ 12 ಗಂಟುಗಳನ್ನು ಹಾಕಿ ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿಣ ಹಚ್ಚಿ ಹೂವನ್ನು ಕಟ್ಟಿ ದೇವಿಯ ಪಕ್ಕದಲ್ಲಿರಿಸಿ ಆರಾಧಿಸಿ ಪೂಜಿಸಿ ನೈವೇದ್ಯ ಮಾಡುವರು. ಹನ್ನೆರಡು ಹೆಸರುಗಳನ್ನು ಉಚ್ಚರಿಸಿ ದ್ವಾದಶನಾಮಾವಳಿಯೆಂದು ಪೂಜಿಸುವರು.

ಆ ನಾಮಾವಳಿಗಳು, ರಮೆ, ಸರ್ವಮಂಗಳೇ, ಕಮಲವಾಸಿನಿ, ಮನ್ಮಥಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧ ಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ ಮತ್ತು ವರಲಕ್ಷ್ಮಿ. ಈ ದಾರಕ್ಕೆ ವಿಶೇಷವಾದ ನೈವೇದ್ಯವನ್ನು ಅರ್ಪಿಸುವರು. ಅಂದು ಶ್ರೀಸೂಕ್ತವನ್ನು ಪಠಿಸುವುದೂ ಒಳ್ಳೆಯದು ಎಂಬುದು ಹಿರಿಯರ ಅಭಿಪ್ರಾಯ. ದೇವಿಯ ಮೂರ್ತಿಗೂ ಅರಿಶಿಣ, ಕುಂಕುಮ, ಹೂವು ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ ಹೆಣ್ಣುಮಕ್ಕಳು ದಾರಗಳಿಗೆ ಹೂವನ್ನು ಕಟ್ಟಿ ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುವರು. ಹಾಗೆ ಕಟ್ಟಿಸಿಕೊಂಡ ನಂತರ ಆ ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ ದಾನವನ್ನು ಕೊಡುವುದು ಒಂದು ವಿಶೇಷವೇ ಆಗಿದೆ.

ಈ ಹಬ್ಬದ ಮತ್ತೊಂದು ವಿಶೇಷವೆಂದರೆ ವಿಷ್ಣುವಿನ ಹೃದಯವಾಸಿ ಲಕ್ಷ್ಮೀ ದೇವಿಯನ್ನು ಯಾವುದೇ ಜಾತಿ, ಮತ, ಭೇದವಿಲ್ಲದೆ ಹಿಂದೂ ಧರ್ಮದ ಎಲ್ಲರೂ ಆ ತಾಯಿಯನ್ನು ವಿವಿಧ ರೀತಿಯಲ್ಲಿ ಪೂಜಿಸಿ ಆರಾಧಿಸುತ್ತಾರೆ. ಪೂಜೆಯ ನಂತರ ಶ್ರೀ ವರಮಹಾಲಕ್ಷ್ಮಿ ವ್ರತ ಕಥಾ ಶ್ರವಣ ಮಾಡಿದವರಿಗೆ ದಾರಿದ್ರ್ಯ ಕಳೆದು, ಆಯಸ್ಸು, ಆರೋಗ್ಯ, ಸಂಪತ್ತು, ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುವುದೆಂಬ ನಂಬಿಕೆ ಇದೆ. ಎಷ್ಟೇ ಆಧುನಿಕ, ಪಾಶ್ಚಿಮಾತ್ಯ ಜೀವನ ನಮ್ಮನ್ನು ಆವರಿಸಿದರೂ ನಾವು ನಮ್ಮ ಸಂಪ್ರದಾಯ, ಪದ್ಧತಿಗಳನ್ನು ಇನ್ನೂ ಉಳಿಸಿಕೊಂಡು ಬಂದಿದ್ದೇವೆ ಎನ್ನುವುದಕ್ಕೆ ಈ ವರಮಹಾಲಕ್ಷ್ಮಿ ಹಬ್ಬದ ಆಚರಣೆಯೇ ಸಾಕ್ಷಿಯಾಗಿದೆ.

Facebook Comments

Sri Raghav

Admin