ಶ್ರವಣಬೆಳಗೊಳದ ಮುಖ್ಯ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ, ನಾಯಿಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ..! (Video)

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ಏ.15-ಕಾಡಿನಿಂದ ನಾಡಿಗೆ ಬಂದ ಚಿರತೆ ನಾಯಿಯೊಂದನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು , ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಶ್ರವಣಬೆಳಗೊಳದ ಮುಖ್ಯರಸ್ತೆಯ ಪೊಲೀಸ್ ಠಾಣೆಯ ಎದುರು ಇಂದು ಮುಂಜಾನೆ 3ರ ಸಮಯದಲ್ಲಿ ಚಿರತೆ ನಾಯಿಯೊಂದನ್ನು ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ಠಾಣೆ ಮುಂಭಾಗ ಇರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

 

Chitan--01

ಚಂದ್ರಗಿರಿ ಬೆಟ್ಟದ ತಪ್ಪಲಿನಿಂದ ಮುಖ್ಯರಸ್ತೆಗೆ ಬಂದ ಚಿರತೆ, ನಾಯಿಗಳ ಹಿಂಡಿನ ಮೇಲೆ ದಾಳಿ ಮಾಡಿ ಒಂದು ನಾಯಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗಿದೆ. ವಿಂದ್ಯಗಿರಿ ಮತ್ತು ಚಂದ್ರಗಿರಿ ಬೆಟ್ಟಗಳ ಗುಹೆಗಳು ಚಿರತೆಗಳ ವಾಸಕ್ಕೆ ಸೂಕ್ತವಾಗಿದ್ದು , ಅಲ್ಲಿ ಆಹಾರ ಸಿಗದಿದ್ದಾಗ ಗ್ರಾಮಗಳಿಗೆ ನುಗ್ಗಿ ಜಾನುವಾರುಗಳನ್ನು ಹೊತ್ತೊಯ್ದು ತಿನ್ನುತ್ತಿವೆ. ಈಗಾಗಲೇ ಶ್ರವಣಬೆಳಗೊಳದ ಅಕ್ಕಪಕ್ಕ ಇರುವ ಗ್ರಾಮಗಳಲ್ಲಿ ಹಸು, ಕುರಿ, ಮೇಕೆ, ನಾಯಿಗಳನ್ನು ತಿಂದು ಹಾಕಿದೆ.

ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಮಹಾಮಸ್ತಾಭಿಷೇಕದ ವೇಳೆ ಚಿರತೆಯೊಂದು ಬೋನಿಗೆ ಬಿದ್ದಿತ್ತು. ದಿನನಿತ್ಯ ನೂರಾರು ಪ್ರವಾಸಿಗರು ಈ ಬೆಟ್ಟಗಳಿಗೆ ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಚಿರತೆಗಳಿರುವುದು ಪ್ರವಾಸಿಗರಿಗೆ ತಿಳಿದಿಲ್ಲ. ಒಂದು ವೇಳೆ ತಿಳಿದರೆ ಪ್ರವಾಸಿಗರೇ ಇತ್ತ ತಲೆ ಹಾಕದಂತಾಗುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು , ಶೀಘ್ರದಲ್ಲೆ ಚಿರತೆಯನ್ನು ಸೆರೆ ಹಿಡಿಯಲಾಗುವುದು ಎಂದು ತಿಳಿಸಿದ್ದಾರೆ.

Facebook Comments

Sri Raghav

Admin