ಶ್ರೀಮುರುಘಾಮಠದಲ್ಲಿ 15 ಜೋಡಿ ಸಾಮೂಹಿಕ ಕಲ್ಯಾಣ ಮಹೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

chitradurga

ಚಿತ್ರದುರ್ಗ ಸೆ.6-ಮಾನವ ತನ್ನ ಬದುಕಿನಲ್ಲಿ ಕ್ರೋಧ, ಕೋಪ ಮೊದಲಾದವುಗಳನ್ನು ತನ್ನ ಹತ್ತಿರ ಸೇರಿಸಿಕೊಳ್ಳಬಾರದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಬಸವಕೇಂದ್ರ ಶ್ರೀಮುರುಘಾಮಠ ಹಾಗೂ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ 26ನೇ ವರ್ಷದ 9ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಶ್ರೀಗಳು, ಮಾನವ ಹಸಿವಿನಿಂದ ಪ್ರಚೋದನೆಗೆ ಒಳಗಾಗುತ್ತಾನೆ. ಹಸಿವು ಒಳ್ಳೆಯದಲ್ಲ. ಮಾನವ ಮಾತ್ರವಲ್ಲ ಪ್ರಾಣಿಗಳಲ್ಲಿಯೂ ಸಹ ಹಸಿವಿನ ಆಕ್ರಂದನ ಆಗಿಂದಾಗ್ಗೆ ಮಾಧ್ಯಮಗಳ ಮೂಲಕ ನೋಡುತ್ತೇವೆ. ಇಂದು ನಮ್ಮ ಸಮಾಜ ಹಸಿವುಮುಕ್ತ ಸಮಾಜವಾಗಬೇಕು. ಪ್ರತಿಯೊಬ್ಬರಿಗೂ ಅನ್ನ ಆಹಾರ ಸಿಗುವಂತಾಗಬೇಕು. ಸುಭಿಕ್ಷೆಯಿಂದ ಬದುಕನ್ನು ನಡೆಸಬೇಕು. ಹಸಿವಿಲ್ಲದಿದ್ದರೆ ಮಾನವ ಸಮಾಜ ಸಕಾರಾತ್ಮಕವಾದ ಚಿಂತನೆಗಳನ್ನು ಮಾಡುತ್ತದೆ ಎಂದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಅಂಬರೀಷ್ ಮಾತನಾಡಿ, ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಅಥವಾ ಅಮಾವಾಸ್ಯೆ ಮೊದಲಾದ ಕೆಟ್ಟ ಕಾಲಗಳೆಂದು ಗುರುತಿಸುವ ಕಾಲಗಳನ್ನು ನೋಡದೆ ಶ್ರೀಮಠ ಕಳೆದ 26ವರ್ಷಗಳಿಂದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಡೆಸುತ್ತ ಬಂದಿರುವುದು ಸಂತಸದ ಸಂಗತಿ. ಇಂತಹ ಬೃಹತ್ ಸಾಧನೆಯನ್ನು ಯಾರೂ ಸಹ ಮಾಡಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಡಾ. ಶಿವಮೂರ್ತಿ ಮುರುಘಾ ಶರಣರು. ಆಡಂಬರ, ಅಬ್ಬರಗಳಿಗೆ ಕಡಿವಾಣ ಹಾಕಿ ಸರಳವಾಗಿ ಬಸವಣ್ಣನವರ ತತ್ವಸಿದ್ಧಾಂತಗಳೊಂದಿಗೆ ಆಚರಿಸುವ ಈ ವಿವಾಹ ಪದ್ಧತಿ ಇಂದು ರಾಷ್ಟ್ರಾದ್ಯಂತ ಮನ್ನಣೆ ಪಡೆದುಕೊಂಡಿದೆ ಎಂದರು.

ಜಿ.ಪಂ.ಮುಖ್ಯಲೆಕ್ಕಾಧಿಕಾರಿ ಕೆ.ಹೆಚ್.ಓಂಕಾರಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಹಾಕಿಕೊಟ್ಟ ಹಾದಿ ದೊಡ್ಡದು. ಕಾಯಕದಲ್ಲಿ ಕೈಲಾಸವನ್ನು ಕಾಣಬೇಕೆಂಬ ಅವರ ಆಶಯ ಜಗತ್ತಿಗೆ ಮಾದರಿಯಾದುದು. ಎಲ್ಲ ವರ್ಗದವರನ್ನು ತನ್ನಂತೆಯೇ ಎಂದು ಭಾವಿಸಿ ನಾವೆಲ್ಲರೂ ಒಂದು ಎಂಬ ಭೂಮಿಕೆಯನ್ನು ಸಿದ್ಧಪಡಿಸಿದವರು ಬಸವಾದಿ ಶರಣರು. ಅವರ ಕಾಯಕ, ದಾಸೋಹದ ಸೇವೆಯನ್ನು ಇಂದು ಪ್ರತಿಯೊಬ್ಬರು ಅನುಸರಿಸುವ ಅಗತ್ಯ ಇದೆ ಎಂದು ಹೇಳಿದರು.ಗದಗ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಮಾತನಾಡಿ, ಬಸವಾದಿ ಶರಣರ ತತ್ತ್ವಗಳನ್ನು ನಿಜಜೀವನದಲ್ಲಿ ಅಳವಡಿಸಿಕೊಂಡಿರುವ ಶ್ರೀಗಳು ಯಥಾವತ್ತಾಗಿ ಆಚರಣೆಗೆ ತರುತ್ತಿದ್ದಾರೆ. ಇದು ಸರಳ ಸಾಮೂಹಿಕ ವಿವಾಹ. ಇದೊಂದು ವೈಚಾರಿಕ ವಿವಾಹ. ಎರಡು ಮನಸ್ಸುಗಳು ಒಂದಾಗುವ ಸಂದರ್ಭವೇ ಶುಭಲಗ್ನ. ನಾನು ಇದೇ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಅಮಾವಾಸ್ಯೆ ದಿನ ವಿವಾಹವಾಗಿದ್ದು, ತದನಂತರ ನನಗೆ ಉತ್ತಮ ಅವಕಾಶಗಳು ಸಿಕ್ಕಿವೆ. ನಮ್ಮ ಮನಸ್ಥಿತಿಗಳು ಆದರ್ಶಪ್ರಾಯವಾಗಿರಬೇಕು ಎಂದರು.

ಸೌದಿ ಅರೇಬಿಯಾದಲ್ಲಿ ಪ್ರಾಧ್ಯಾಪಕರಾಗಿರುವ ಕನಕರಾಜು ಮಾತನಾಡಿ, ಕಲ್ಯಾಣ ಎನ್ನುವುದು 12ನೇ ಶತಮಾನದಲ್ಲಿ ಆರಂಭವಾದದ್ದು. ಇಂದು ಹಲವು ರೂಪಗಳನ್ನು ಪಡೆದುಕೊಂಡಿದೆ. ಈ ಪದ ಕೇಳಿದೊಡನೆ ಮೈ ರೋಮಾಂಚನವಾಗುತ್ತದೆ. ಮುರುಘಾ ಶರಣರು ಒಬ್ಬ ಮನೋವಿಜ್ಞಾನಿ. ಜನಸಾಮಾನ್ಯರಿಗೆ ಅವರು ಮುಟ್ಟಿಸಿದ ಪ್ರಜ್ಞೆ  ಅಭೂತಪೂರ್ವವಾದುದು. ರೈತಮುಖಂಡ ನುಲೇನೂರು ಶಂಕರಪ್ಪ, ಎನ್.ತಿಪ್ಪಣ್ಣ, ಪೈಲ್ವಾನ್ ತಿಪ್ಪೇಸ್ವಾಮಿ, ಎ.ಜೆ.ಪರಮಶಿವಯ್ಯ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 15 ಜೋಡಿ ನವವಧು-ವರರು ದಾಂಪತ್ಯಜೀವನಕ್ಕೆ ಕಾಲಿರಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin