ಸಂಕಷ್ಟ ಪರಿಹರಿಸುವಂತೆ ದೇವಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿದ್ದೇನೆ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiha-01

ಮೈಸೂರು, ಅ.1- ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ರಾಜ್ಯಗಳ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸುವಂತೆ ದೇವಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದಸರಾ ಉದ್ಘಾಟನೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ವರ್ಷ ಬರಗಾಲವಿದ್ದರೂ ಸಂಕಷ್ಟ ಎದುರಾಗಿರಲಿಲ್ಲ. ಆದರೆ, ರಾಜ್ಯದ ಜನತೆ ಈ ಬಾರಿ ತೊಂದರೆಗೆ ಸಿಲುಕಿರುವುದರಿಂದ ದಸರಾ ಉತ್ಸವವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ ಎಂದರು. ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶೇ.40ರಷ್ಟು ಮಳೆ ಕಡಿಮೆ ಆಗಿದ್ದು, ಕಾವೇರಿ ಜಲಾನಯನ ಪ್ರದೇಶಗಳಲ್ಲೂ ಮಳೆ ಆಗದೆ ಸಮಸ್ಯೆ ಎದುರಾಗಿದೆ. ಇದೇ ಸಂದರ್ಭದಲ್ಲಿ ನ್ಯಾಯಾಲಯ ಕೂಡ ನೀರು ಹರಿಸುವಂತೆ ಆದೇಶ ನೀಡಿರುವುದರಿಂದ ಬಿಕ್ಕಟ್ಟು ಬಿಗಡಾಯಿಸಿದೆ ಎಂದರು.

ತಮಿಳುನಾಡು ಸರ್ಕಾರ ಬೆಳೆಗಾಗಿ ನೀರು ಕೇಳುತ್ತಿದೆ. ನಮ್ಮಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಹಾಗಾಗಿ ರೈತರಿಗೂ ಸಹ ಬೆಳೆ ಬೆಳೆಯದಂತೆ ಸೂಚಿಸಲಾಗಿದೆ ಎಂದ ಅವರು, ಈ ಹಿಂದಿನ ಒಪ್ಪಂದದಿಂದ ನಾವಿಂದು ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಬೇಕಾದ ಅನಿರ್ವಾಯತೆ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಮಗೆ 257 ಟಿಎಂಸಿ ನೀರು ಬರಬೇಕಿತ್ತು. ಆದರೆ, 129 ಟಿಎಂಸಿಯಷ್ಟು ನೀರು ಬಂದಿರುವುದರಿಂದ ತೊಂದರೆಯಾಗಿದೆ. ಕರ್ನಾಟಕದಲ್ಲಿ ಈ ವರ್ಷದಲ್ಲಿ ಇನ್ನು ಮುಂದೆ ಮಳೆಯಾಗುವ ಅವಕಾಶಗಳಿಲ್ಲ. ಆದರೆ ತಮಿಳುನಾಡಿಗೆ ಮಳೆ ಬರುವ ಅವಕಾಶಗಳಿದ್ದರೂ ನೀರು ಬೇಕು ಎಂದು ಕೇಳಿ ನಮ್ಮನ್ನು ಸಂಕಷ್ಟದಲ್ಲಿ ಸಿಲುಕಿಸಿದೆ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin