ಸಂಗೊಳ್ಳಿ ರಾಯಣ್ಣ ಬ್ರಿಗೇಡ್ಗೆ ಸಂಘ ಪರಿವಾರ ಜೈ
ಬೆಂಗಳೂರು, ಆ.27- ಹಿಂದೂ ಸಮುದಾಯಗಳನ್ನು ಒಂದುಗೂಡಿಸಿ ಬಿಜೆಪಿಯನ್ನು ಮರಳಿ ಅಕಾರಕ್ಕೆ ತರುವ ಕನಸಿನೊಂದಿಗೆ ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಸ್ಥಾಪಿಸಲು ಹೊರಟಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ಗೆ ಇದೀಗ ಸಂಘ ಪರಿವಾರದ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದು, ಇದರ ಬೆನ್ನಲ್ಲೇ ಬ್ರಿಗೇಡ್ನ ಮೊಟ್ಟ ಮೊದಲ ಸಮಾವೇಶ ಅಕ್ಟೋಬರ್ 1ರಂದು ಹಾವೇರಿಯಲ್ಲಿ ನಡೆಯಲಿದೆ. ಸಮಾವೇಶಕ್ಕೆ ಪೂರ್ವಭಾವಿಯಾಗಿ ಆಗಸ್ಟ್ 31ರಂದು ಕೂಡಲ ಸಂಗಮದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ಪೂರ್ವಭಾವಿ ಸಭೆ ನಡೆಯ ಲಿದ್ದು, ಅಂದು ರಾಜ್ಯದ ಎಲ್ಲ ಭಾಗಗಳಿಂದ ಸಭೆಗೆ ಆಗಮಿಸಲಿರುವ ನಾಯಕರು ಬ್ರಿಗೇಡ್ನ ರೂಪುರೇಷೆಗಳನ್ನು ನಿರ್ಧರಿಸಲಿದ್ದಾರೆ.
ಸಂಘ ಪರಿವಾರ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಸಂಗೊಳ್ಳಿ ರಾಯಣ್ಣ ಪಡೆಯ ಸ್ಥಾಪನೆಯ ಬಗ್ಗೆ ಕೇಳಿ ಬಂದಿದ್ದ ಊಹಾಪೋಹಗಳಿಗೆಲ್ಲ ತೆರೆ ಬಿದ್ದಂತಾಗಿದೆ. ಈ ಮುನ್ನ ಸೆ. 26ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ಮೊಟ್ಟ ಮೊದಲ ಸಮಾವೇಶ ನಡೆಸಲು ನಿರ್ಧರಿಸಲಾಗಿತ್ತಾದರೂ ಸೆ. 16 ರಿಂದ 30ರವರೆಗೆ ಪಿತೃ ಪಕ್ಷ ಇರುವ ಹಿನ್ನೆಲೆಯಲ್ಲಿ ಅ. 1ರಂದು ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ, ಸಂಘ ಪರಿವಾರದ ನಾಯಕರು ಸೂಚನೆ ನೀಡಿದ ಬೆನ್ನಲ್ಲೇ ಇದುವರೆಗೂ ಬ್ರಿಗೇಡ್ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಪಕ್ಷದ ರಾಜಧ್ಯಕ್ಷ ಯಡಿಯೂರಪ್ಪ ಕೂಡ ಈಶ್ವರಪ್ಪ ಅವರ ಯತ್ನಕ್ಕೆ ವಿರೋಧ ವ್ಯಕ್ತಪಡಿಸದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಸಂಘ ಪರಿವಾರದ ನಾಯಕರ ಸಲಹೆಯ ನಂತರ ವಸ್ತು ಸ್ಥಿತಿಗೆ ಒಗ್ಗಿಕೊಂಡಿರುವ ಯಡಿಯೂರಪ್ಪ ಇದ್ದಕ್ಕಿದ್ದಂತೆ ಗುರುವಾರ ಒಂದು ಹೇಳಿಕೆಯನ್ನು ಹೊರಡಿಸಿ, ತಮ್ಮ ಹೆಸರಿನಲ್ಲಿ ಯಾವುದೇ ಅಭಿಮಾನಿ ಸಂಘವನ್ನಾಗಲೀ, ವೇದಿಕೆಯನ್ನಾಗಲೀ ನಿರ್ಮಿಸದಂತೆ ಸೂಚನೆ ನೀಡಿದ್ದರು. ಹಾಗೆಯೇ ಹಿಂದುಳಿದ, ದಲಿತ ಸಮುದಾಯ ಗಳನ್ನು ಒಗ್ಗೂಡಿಸಿ ಬಿಜೆಪಿಯನ್ನು ಅಕಾರಕ್ಕೆ ತರುವ, ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಉದ್ದೇಶ ಹೊಂದಿರುವ ಮತ್ತು ಪಕ್ಷದ ಕೆಳಗೇ ಕೆಲಸ ಮಾಡಲು ನಿರ್ಧರಿಸಿರುವ ಸಂಗೊಳ್ಳಿ ರಾಯಣ್ಣ ಪಡೆಯ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸದಿರಲು ಯಡಿಯೂರಪ್ಪ ತೀರ್ಮಾನಿಸಿದ್ದು, ಇದರಿಂದ ಇದುವರೆಗೂ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದ ವಿಷಯ ಇತ್ಯರ್ಥವಾಗಿ ಅಕ್ಟೋಬರ್ 1 ರಂದು ಹಾವೇರಿಯಲ್ಲಿ ಮೊಟ್ಟ ಮೊದಲ ಸಮಾವೇಶ ನಡೆಯುವುದು ನಿಶ್ಚಿತವಾಗಿದೆ.
► Follow us on – Facebook / Twitter / Google+