ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಿಜೆಪಿಯ ಕೆಲ ನಾಯಕರಿಂದ ಪರೋಕ್ಷ ಬೆಂಬಲ..!

ಈ ಸುದ್ದಿಯನ್ನು ಶೇರ್ ಮಾಡಿ

Eshwarappa

ಬೆಂಗಳೂರು, ಸೆ.27- ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತಾಗಿದೆ ಬಿಜೆಪಿ ಪರಿಸ್ಥಿತಿ. ಕಾರಣ ಬಿಜೆಪಿಯ ಮುಖಂಡ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸ್ಥಾಪಿತವಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್. ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿರುವುದರಿಂದ ಇದರಲ್ಲಿ ಯಾರೊಬ್ಬರೂ ಗುರುತಿಸಿಕೊಳ್ಳಬಾರದು ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಾಕೀತು ಮಾಡಿದ್ದಾರೆ. ಒಳಗೊಳಗೆ ಯಡಿಯೂರಪ್ಪನವರಿಗೆ ಮುಜುಗರ ಮಾಡಬೇಕೆಂಬ ಉದ್ದೇಶದಿಂದ ಬಿಜೆಪಿಯ ಕೆಲ ನಾಯಕರು ಬ್ರಿಗೆಡ್‍ಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ, ಬಹಿರಂಗವಾಗಿ ಮಾತ್ರ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಅ.2ರಂದು ಹಾವೇರಿಯಲ್ಲಿ ಈಶ್ವರಪ್ಪ ಬ್ರಿಗೆಡ್‍ನ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ. ಈವರೆಗೂ ಬಿಜೆಪಿ ಯಾವುದೇ ನಾಯಕರನ್ನು ಅಧಿಕೃತವಾಗಿ ಆಹ್ವಾನಿಸಿಲ್ಲ. ಸಮಾವೇಶದಲ್ಲಿ ಪಾಲ್ಗೊಂಡರೆ ಯಡಿಯೂರಪ್ಪನವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಹೆದರಿ ದೂರ ಸರಿದಿದ್ದಾರೆ. ಪಕ್ಷದಲ್ಲಿ ಹೆಚ್ಚುತ್ತಿರುವ ಯಡಿಯೂರಪ್ಪನವರ ಏಕಚಕ್ರಾಧಿಪತ್ಯ ಕೊನೆಗಾಣಿಸಲು ಈಶ್ವರಪ್ಪನವರಿಗೆ ಪಕ್ಷದೊಳಗಿರುವ ಕೆಲವರು ಸಾಥ್ ನೀಡುತ್ತಿದ್ದಾರೆ. ಯಡಿಯೂರಪ್ಪನವರ ಕೆಂಗಣ್ಣಿಗೆ ಗುರಿಯಾದರೆ ಮುಂದೆ ನಡೆಯಲಿರುವ ಎಲ್ಲ ಹಂತದ ಚುನಾವಣೆಗೆ ಟಿಕೆಟ್ ತಪ್ಪಿಸಬಹುದೆಂಬ ಕಾರಣಕ್ಕಾಗಿ ಒಲ್ಲದ ಮನಸ್ಸಿನಿಂದ ಬ್ರಿಗೆಡ್‍ನ ಚಟುವಟಿಕೆಗಳಿಂದ ಕೆಲವರು ದೂರ ಉಳಿಯುತ್ತಿದ್ದಾರೆ.

ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಚಟುವಟಿಕೆಯಿಂದ ಪಕ್ಷದ ಸಂಘಟನೆಗೆ ಬಲ ತರುವುದಾದರೆ ಅಡ್ಡಿಪಡಿಸಬಾರದೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಯಡಿಯೂರಪ್ಪನವರಿಗೆ ಕಿವಿಮಾತು ಹೇಳಿದ್ದಾರೆ. ಆದರೆ, ಹಠಮಾರಿ ಸ್ವಭಾವದ ಬಿಎಸ್‍ವೈ ಇಟ್ಟ ಹೆಜ್ಜೆ ಹಿಂದೆ ಸರಿಯಬಾರದೆಂಬ ಕಾರಣಕ್ಕಾಗಿ ಯಾವುದೇ ಕಾರಣಕ್ಕೂ ನಾನು ಈಶ್ವರಪ್ಪನವರ ಬ್ರಿಗೆಡ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇನ್ನು ಹಾವೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೂ, ಪಕ್ಷಕ್ಕೂ ಸಂಬಂಧವಿಲ್ಲ ಎಂದು ಈಶ್ವರಪ್ಪ ರಾಜಾರೋಷವಾಗಿ ಹೇಳುತ್ತಿದ್ದರೂ ಬಹುತೇಕ ಇದು ಪಕ್ಷದ ಅನಧಿಕೃತ ಕಾರ್ಯಕ್ರಮವೆಂದೇ ಬಿಂಬಿತವಾಗಿದೆ.

ಬಿಎಸ್‍ವೈ ವಿರೋಧಿಗಳು ಈ ಕಾರ್ಯಕ್ರಮಕ್ಕೆ ತೆರೆಮರೆಯಲ್ಲಿ ತನು-ಮನ-ಧನ ಎಲ್ಲವನ್ನೂ ಅರ್ಪಿಸಿದ್ದು, ಸಮಾವೇಶಕ್ಕೆ ಕಾರ್ಯಕರ್ತರನ್ನು ಕಳುಹಿಸಿಕೊಡಲು ಬೇಕಾದ ಸಕಲ ವ್ಯವಸ್ಥೆಯನ್ನೂ ಮಾಡಿದ್ದಾರೆ ಎನ್ನಲಾಗಿದೆ. ಪಕ್ಷದೊಳಗೆ ಈಶ್ವರಪ್ಪ ಕೈ ಮೇಲಾದಂತೆ ಯಡಿಯೂರಪ್ಪನವರ ವರ್ಚಸ್ಸು ಕುಗ್ಗುತ್ತದೆ. ಹೀಗಾಗಿ ತಾವು ಪಕ್ಷದಲ್ಲಿ ಭವಿಷ್ಯದ ನಾಯಕರಾಗಿ ಹೊರಹೊಮ್ಮಬಹುದೆಂಬ ಕಾರಣಕ್ಕಾಗಿ ಬ್ರಿಗೆಡ್ ಚಟುವಟಿಕೆಗಳಿಗೆ ನೀರು, ಗೊಬ್ಬರ ಸೇರಿದಂತೆ ಎಲ್ಲ ರೀತಿಯ ಸಹಕಾರ, ನೆರವು ನೀಡುತ್ತಿದ್ದಾರೆ.  ಪಕ್ಷದ ಯಾವುದೇ ಕಾರ್ಯಕರ್ತರು ಬ್ರಿಗೆಡ್‍ನಲ್ಲಿ ಪಾಲ್ಗೊಳ್ಳದಂತೆ ಬಿಎಸ್‍ವೈ ಈಗಾಗಲೇ ಕಟ್ಟಾಜ್ಞೆ ವಿಧಿಸಿದ್ದಾರೆ. ಇದಾವುದನ್ನೂ ಲೆಕ್ಕಿಸದ ಈಶ್ವರಪ್ಪ , ಯಡಿಯೂರಪ್ಪಗೆ ಸಡ್ಡು ಹೊಡೆಯುವುದಾಗಿಯೇ ಬೆದರಿಕೆ ಹಾಕಿದ್ದಾರೆ.
ಹೀಗೆ ಒಂದೇ ಜಿಲ್ಲೆಯಲ್ಲಿ ಹಕ್ಕ-ಬುಕ್ಕರಂತೆ ಬೆಳೆದು ಪರಸ್ಪರ ವಿರುದ್ಧ ದಿಕ್ಕಿಗೆ ಸಾಗುತ್ತಿರುವ ಈ ಇಬ್ಬರೂ ನಾಯಕರ ಚಟುವಟಿಕೆಗಳಿಂದ ಕಾರ್ಯಕರ್ತರು ಅಸಮಾಧಾನಗೊಂಡಿರುವುದು ಗುಟ್ಟಾಗಿ ಉಳಿದಿಲ್ಲ.

ಯಡಿಯೂರಪ್ಪ ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು. ಇನ್ನು ಈಶ್ವರಪ್ಪ ಕೂಡ ಪಕ್ಷದ ಬ್ಯಾನರ್ ಅಡಿಯೇ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಕೈಗೊಂಡರೆ ಎಲ್ಲರಿಗೂ ಒಳಿತು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಆದರೆ, ಹಾವು-ಮುಂಗುಸಿಯಂತಿರುವ ಈ ಇಬ್ಬರೂ ನಾಯಕರು ಒಂದಾಗುವುದೆಂದರೆ ಲೆಕ್ಕಾಚಾರ ಅಷ್ಟು ಸರಳವಾಗಿ ಇಲ್ಲ ಎನ್ನುತ್ತಾರೆ ಹಿರಿಯ ಮುಖಂಡರೊಬ್ಬರು.

► Follow us on –  Facebook / Twitter  / Google+

Facebook Comments

Sri Raghav

Admin