ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಲ್ಲ : ಈಶ್ವರಪ್ಪ ಶಪಥ

ಈ ಸುದ್ದಿಯನ್ನು ಶೇರ್ ಮಾಡಿ

Eshwarapa-Brigade

ಬೆಂಗಳೂರು,ಮಾ.4-2-ಹಿಂದುಳಿದವರು, ದಲಿತರು ಹಾಗೂ ಬಡವರಿಗೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಡೆಸುತ್ತಿದ್ದೇವೆಯೇ ಹೊರತು ಬಿಜೆಪಿ ಅಥವಾ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.  ನಗರದ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್‍ನಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಬಿಜೆಪಿಯಲ್ಲಿ ಭಿನ್ನಮತ, ಬಿ.ಎಸ್.ಯಡಿಯೂರಪ್ಪ ವಿರುದ್ದ ಅಸಮಾಧಾನ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಗಿತ ಇತ್ಯಾದಿ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಇದರ ಬಗ್ಗೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದೆಂದು ಅವರು ಮನವಿ ಮಾಡಿದರು.

ಯಾರಿಗೆ ಅನ್ಯಾಯವಾಗಿದೆಯೋ ಅಂಥವರಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂಬುದು ನಮ್ಮ ಉದ್ದೇಶ. ಹಿಂದುಳಿದವರು, ದಲಿತರು, ಬಡವರಿಗೆ ರಾಯಣ್ಣ ಬ್ರಿಗೇಡ್ ಮೂಲಕವೇ ನ್ಯಾಯ ಒದಗಿಸಿಕೊಟ್ಟು ಇದರ ಉದ್ದೇಶವನ್ನು ಮಾಡಿ ತೋರಿಸೋಣ ಎಂದು ಹೇಳಿದರು.   ನಾನು ಯಾವುದೇ ರಾಯಣ್ಣ ಬ್ರಿಗೇಡ್ ಚಟುವಟಿಕೆಯಿಂದ ಹಿಂದೆ ಸರಿಯುವುದಿಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಷಾ ಕೂಡ ಚಟುವಟಿಕೆಯಿಂದ ಹಿಂದೆ ಸರಿಯದಂತೆ ಸೂಚಿಸಿದ್ದಾರೆ. ಇದನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.   ರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತರಿಗೆ ನ್ಯಾಯ ಸಿಗುವವರೆಗೂ ನಾನು ಸುಮ್ಮನೆ ಕೂರುವುದಿಲ್ಲ. ಈಗಾಗಲೇ ಅಮಿತ್ ಷಾ ಹಾಗೂ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕಗೆ ನಡೆಸಿದ್ದೇನೆ. ಶೀಘ್ರದಲ್ಲೆ ಎಲ್ಲ ಗೊಂದಲಗಳು ನಿವಾರಣೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಮಾನತು ಆದೇಶ ವಾಪಸ್ ಪಡೆಯುವುದು, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ಯಾವ ಕಾರಣಕ್ಕಾಗಿ ವಿಳಂಬ ಮಾಡಿದ್ದಾರೆ ಎಂಬುದು ತಿಳಿದಿಲ್ಲ ಎಂದರು.   ನಿನ್ನೆ ತುಮಕೂರಿನಲ್ಲಿ ಕೆಲವು ಮುಖಂಡರು ಸಭೆ ಸೇರಿ ತಮ್ಮ ಅನಿಸಿಕೆಗಳನ್ನು ಹೊರಹಾಕಿದ್ದಾರೆ. ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ಅವಕಾಶ ನೀಡದೆ ರಾಜ್ಯ ಮಟ್ಟದಲ್ಲೇ ಈ ಗೊಂದಲ ಇತ್ಯರ್ಥವಾಗಬೇಕೆಂದು ಈಶ್ವರಪ್ಪ ಹೇಳಿದರು.  ರಾಯಣ್ಣ ಬ್ರಿಗೇಡ್ ಎಂದರೆ ಕೇವಲ ಸಮಾವೇಶ ನಡೆಸುವುದಕ್ಕಷ್ಟೇ ಅಲ್ಲ. ಸಂಘಟನೆ  ಮೂಲಕ ಜನರನ್ನು ಜಾಗೃತಿ ಮೂಡಿಸುವುದು, ಶಿಕ್ಷಣ ವಂಚಿತರನ್ನು ಸುರಕ್ಷಿತರನ್ನಾಗಿ ಮಾಡುವುದು ಬ್ರಿಗೇಡ್‍ನ ಗುರಿಯಾಗಿರಬೇಕು. ಇನ್ನು ಮುಂದೆ ಪ್ರತಿ ತಿಂಗಳ 4ರಂದು ಒಂದೊಂದು ಜಿಲ್ಲೆಯಲ್ಲಿ ಬ್ರಿಗೇಡ್ ಪದಾಧಿಕಾರಿಗಳ ಸಭೆ ನಡೆಸಬೇಕು, ಮುಂದಿನ ಸಭೆಯೊಳಗೆ ಎಲ್ಲಾ ಸಮಿತಿಗಳನ್ನು ರಚಿಸಬೇಕೆಂದು ಸೂಚಿಸಿದರು.

ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಹಲವರನ್ನು ಆಹ್ವಾನಿಸಿ ಬೃಹತ್ ಸಮಾವೇಶ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು.   ಪದಾಧಿಕಾರಿಗಳ ಪಟ್ಟಿ: ಇದೇ ವೇಳೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.   ರಾಜ್ಯಾಧ್ಯಕ್ಷರಾಗಿ ಕೆ.ವಿರೂಪಾಕ್ಷಪ್ಪ , ಕಾರ್ಯಾಧ್ಯಕ್ಷರಾಗಿ ಕೆ.ಮುಕುಡಪ್ಪ , ಗೌರವ ಅಧ್ಯಕ್ಷರಾಗಿ ಎಸ್.ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ವೆಂಕಟೇಶಮೂರ್ತಿ, ಉಪಾಧ್ಯಕ್ಷರಾಗಿ ಸಂಗ್ರಾಮ್ ಸಿಂಗ್, ಖಜಾಂಚಿಯಾಗಿ ಟಿ.ಪಿ.ಬೆಳಗಾವಿ, ಕಾರ್ಯದರ್ಶಿಯಾಗಿ ಬ್ರಿಜ್ ಮೋಹನ್, ನಿರ್ದೇಶಕರಾಗಿ ಶರಣಪ್ಪ ತಲವಾರ ಸೇರಿದಂತೆ ಹಲವರನ್ನು ನೇಮಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin