ಸಂಜೆಯಾಗುತ್ತಿದ್ದಂತೆ ಟಿವಿ ನೋಡಿ ಬೆಚ್ಚಿಬೀಳುತ್ತಿದ್ದಾರೆ ಮಕ್ಕಳು..!
ತುಮಕೂರು, ಫೆ.24- ಸಂಜೆ ವೇಳೆ ಟಿವಿ ಆನ್ ಮಾಡಿದರೆ ಬರುವ ದೆವ್ವ, ಭೂತ ಸೇರಿದಂತೆ ಇತರೆ ಭಯಾನಕ ಧಾರಾವಾಹಿಗಳಿಂದ ನಗರದ ಜನತೆ ಚಿಂತೆಗೀಡಾಗಿದ್ದಾರೆ..! ಇತ್ತೀಚಿನ ದಿನಗಳಲ್ಲಿ ಭಯ ಹುಟ್ಟಿಸುವ ದೃಶ್ಯಗಳು ಪ್ರಸಾರವಾಗುತ್ತಿದ್ದು, ಅದನ್ನು ನೋಡಿದ ಮಕ್ಕಳು ರಾತ್ರಿವೇಳೆ ಬೆಚ್ಚಿ ಬೀಳುವ ಪ್ರಸಂಗಗಳು ನಡೆಯುತ್ತಿದ್ದು, ಇನ್ನೂ ಕೆಲವೆಡೆ ಚಳಿಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಧಾರಾವಾಹಿಯಲ್ಲಿ ಬರುವ ಭೂತ ದೃಶ್ಯ ನೋಡಿ ಇಂಡೋಕಿಡ್ಸ್ ಶಾಲೆಯ ಮಕ್ಕಳು ಚಳಿ ಜ್ವರದಿಂದ ಬಳಲುತ್ತಿದ್ದಾರೆ.
ಮನೆಯವರು ದೆವ್ವದ ಧಾರಾವಾಹಿ ನೋಡುತ್ತಿದ್ದು, ಅದೇ ವೇಳೆ ವಿದ್ಯಾರ್ಥಿನಿ ಪುಷ್ಮಿತಾ ಕೂಡ ಧಾರಾವಾಹಿಯನ್ನು ವೀಕ್ಷಿಸಿ ಅದರಲ್ಲಿ ಬರುವ ಭೂತದ ಕತೆಯನ್ನು ಶಾಲೆಗೆ ಬಂದು ಸಹಪಾಠಿ ಪ್ರತೀಕ್ಷಾಗೆ ಹೇಳಿದ್ದಾಳೆ. ಧಾರಾವಾಹಿಯಲ್ಲಿ ಇರುವಂತೆ ಶಾಲೆಯಲ್ಲೂ ಕೂಡ ಭೂತ-ಪಿಶಾಚಿ ಇದೆ ಎಂದು ಪುಷ್ಮಿತಾ ತಾನು ಹೆದರುವುದಲ್ಲದೆ ಪ್ರತೀಕ್ಷಾಗೂ ಹೆದರಿಸಿದ್ದಾಳೆ. ಇದೇ ಗುಂಗಿನಲ್ಲಿ ಮನೆಗೆ ಹೋದ ಪ್ರತೀಕ್ಷಾ ಚಳಿ ಜ್ವರದಿಂದ ಬಳಲುತ್ತಿದ್ದು, ಪೋಷಕರು ವೈದ್ಯರ ಬಳಿ ಕರೆದುಕೊಂಡು ಹೋದಾಗ ಯಾವುದೇ ವೈರಾಣು ಅಥವಾ ಇತರೆ ಕಾರಣಗಳಿಂದ ಜ್ವರ ಬಂದಿಲ್ಲ. ಹೆದರಿಕೆಯಿಂದ ಬಂದಿರುವ ಜ್ವರ ಎಂದು ತಿಳಿಸಿದ್ದಾರೆ. ನಂತರ ಪ್ರತೀಕ್ಷಾ ಮನೆಯಲ್ಲೂ ಸಹ ಧಾರಾವಾಹಿಯ ಸೀನ್ಗಳ ಕುರಿತಂತೆ ನಿದ್ದೆಯಲ್ಲಿ ಕನವರಿಸುತ್ತಿದ್ದಾಗ ಇದು ಧಾರಾವಾಹಿಯ ಎಫೆಕ್ಟ್ ಎಂದು ತಿಳಿದುಬಂದಿದೆ.