ಸಂಜೆ ರಾಜ್ಯ ಸಚಿವ ಸಂಪುಟ ಸಭೆ : ಜೋಗ್ ಫಾಲ್ಸ್ ಅಭಿವೃದ್ಧಿ ಸೇರಿ ಹಲವು ತೀರ್ಮಾನ ಕೈಗೊಳ್ಳುವ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Cabinet

ಬೆಂಗಳೂರು,ಆ.17-ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1985ಕ್ಕೆ ತಿದ್ದುಪಡಿ ತರುವುದು, ಶಿವಮೊಗ್ಗ ಜಿಲ್ಲೆಯ ಜೋಗ್ ಜಲಪಾತ ಅಭಿವೃದ್ಧಿಪಡಿಸುವ ಬಗ್ಗೆ ಇಂದು ಸಂಜೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.   ಇಂದು ಸಂಜೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯ ಜೋಗ್ ಪ್ರದೇಶದಲ್ಲಿನ ನೀರಿನ ಮರುಬಳಕೆ ಮಾಡಿ ಸರ್ವಋತು ಜಲಪಾತವನ್ನಾಗಿ ನಿರ್ಮಿಸುವ ಯೋಜನೆಯನ್ನು ಅಬುದಾಬಿಯ ವಿ.ಆರ್.ಎಸ್ ವೆಂಚರ್ಸ್ ಸಂಸ್ಥೆಗೆ ವಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಂಭವವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.  ಗ್ರಾಮೀಣ ರಸ್ತೆ ಪರಿಮಿತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ನಾಲ್ಕು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸುವ 200 ಕೋಟಿ ರೂ.ಗಳ ಯೋಜನೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡುವ ಸಾಧ್ಯತೆಗಳಿವೆ.

ಕೇಂದ್ರ ಸರ್ಕಾರದ ನೆರವಿನೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಬಳ್ಳಾರಿ ನಗರದಲ್ಲಿ ಉನ್ನತ ಮಟ್ಟದ ತರಬೇತಿ ಕೇಂದ್ರ ಸ್ಥಾಪಿಸುವುದು, ರಾಜ್ಯದಲ್ಲಿ ಇ-ಆಸ್ಪತ್ರೆ ಅನುಷ್ಠಾನಕ್ಕೆ ಅವಶ್ಯವಿರುವ ಮಾಹಿತಿ ತಂತ್ರಜ್ಞಾನ ಉಪಕರಣ ಖರೀದಿಗಾಗಿ 24.70 ಕೋಟಿ ರೂ.ಗಳ ಟೆಂಡರ್ ಕರೆಯಲು ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.   ಕರ್ನಾಟಕ ಶಿಕ್ಷಣ ಸೇವೆಗಳು ನಿಯಮ-2014ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡುವ ಸಾಧ್ಯತೆಗಳಿದ್ದು, ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಕಲ್ಬುರ್ಗಿ ಜಿಲ್ಲೆಯಲ್ಲಿ 137 ಅಡುಗೆ ಕೋಣೆ, ದಾಸ್ತಾನು ಕೊಠಡಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 111 ಅಡುಗೆ ಕೋಣೆ ಮತ್ತು ದಾಸ್ತಾನು ಕೊಠಡಿಗಳನ್ನು ನಿರ್ಮಿಸಲು 10.95 ಕೋಟಿ ರೂ.ಗಳ ಅನುದಾನ ನೀಡಲು ಆಡಳಿತಾತ್ಮಕ ಅನುಮತಿ ನೀಡುವ ಸಂಭವವಿದೆ.

ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಎಂ.ಕೆ.ಗಣಪತಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ನೇಮಿಸಿರುವ ಏಕಸದಸ್ಯ ವಿಚಾರಣಾ ಆಯೋಗ ನೇಮಕ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಿದೆ.  ಭ್ರಷ್ಟಾಚಾರ ನಿಗ್ರಹ ದಳದ ವಿವಿಧ ದರ್ಜೆಯ ಅಧಿಕಾರಿಗಳಿಗೆ 122 ವಿವಿಧ ಮಾದರಿಯ ವಾಹನಗಳನ್ನು ಖರೀದಿಸಲು 6.94 ಕೋಟಿ ರೂ.ಗೆ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.
ಕರ್ನಾಟಕ ಸಾಮಾನ್ಯ ಸೇವೆಗಳು ಮತ್ತು ನಿಯಮಗಳು 2016ಕ್ಕೆ ಅನುಮೋದನೆ ನೀಡುವ ಸಂಭವವಿದ್ದು , ಕರ್ನಾಟಕ ಲೋಕಾಯುಕ್ತ ನಿಯಮಗಳು 1985ರ ನಿಯಮ 7ರಡಿ ನಿಗದಿಪಡಿಸಿರುವ ನಮೂನೆ 4ಕ್ಕೆ ತಿದ್ದುಪಡಿ ತರಲು ಸಂಪುಟ ಸಮ್ಮತಿಸುವ ಸಾಧ್ಯತೆಗಳಿವೆ.  ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ಏಕಗವಾಕ್ಷಿ ಅನುಮೋದನಾ ಸಮಿತಿಗಳ ಪುನಾರಚನೆಗಾಗಿ ಕೈಗಾರಿಕೆಗಳ ಕಾಯ್ದೆಗೆ ಮಾಡಿರುವ ತಿದ್ದುಪಡಿಗಳಿಗೆ ಘಟನೋತ್ತರ ಅನುಮೋದನೆ ನೀಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin