ಸಂಪುಟಕ್ಕೆ ಕೆ.ಜೆ.ಜಾರ್ಜ್ ರೀಎಂಟ್ರಿ..?

ಈ ಸುದ್ದಿಯನ್ನು ಶೇರ್ ಮಾಡಿ

Re-enrt

ಬೆಂಗಳೂರು, ಸೆ.24- ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಲು ಸೋಮವಾರ ಬೆಳಗ್ಗೆ 9.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟವನ್ನು ವಿಸ್ತರಣೆ ಮಾಡುತ್ತಿದ್ದಾರೆ. ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಹಿಂದಿನ ಗೃಹ ಸಚಿವ ಕೆ.ಜೆ.ಜಾರ್ಜ್, ಗುಪ್ತ ದಳದ ಎಡಿಜಿಪಿ ಎ.ಎಂ.ಪ್ರಸಾದ್, ಲೋಕಾಯುಕ್ತ ಡಿಐಜಿ ಪ್ರಣಬ್‍ಮೊಹಂತಿ ಅವರ ಕಿರುಕುಳ ಹೆಚ್ಚಾಗಿದೆ ಎಂದು ದೃಶ್ಯ ಮಾಧ್ಯಮದಲ್ಲಿ ಹೇಳಿಕೆ ನೀಡಿ ನಂತರ ಕೊಡಗಿನ ಖಾಸಗಿ ಹೋಟೆಲ್‍ನಲ್ಲಿ ನೇಣಿಗೆ ಶರಣಾಗಿದ್ದರು.  ಈ ವಿವಾದ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೊಡಗಿನಲ್ಲಿ ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅನಂತರ ಸಂಪುಟ ವಿಸ್ತರಣೆ ನಡೆಯಿತ್ತಾದರೂ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಜಾರ್ಜ್ ಅವರನ್ನು ಹೊರಗಿಡಲಾಗಿತ್ತು. ಈ ನಡುವೆ ಜಾರ್ಜ್ ಅವರು ನಿಭಾಯಿಸುತ್ತಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಯಾರಿಗೂ ಹಂಚಿಕೆ ಮಾಡದೆ ಮುಖ್ಯಮಂತ್ರಿ ತಮ್ಮ ಬಳಿಯೆ ಉಳಿಸಿಕೊಂಡಿದ್ದರು. ಸಂಪುಟದಲ್ಲಿ ಒಂದು ಸ್ಥಾನವನ್ನು ಅವರಿಗಾಗಿ ಮೀಸಲಿಡಲಾಗಿತ್ತು. ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿದ ಸಿಐಡಿ ಪೊಲೀಸರು ಜಾರ್ಜ್ ಮೇಲಿನ ಆರೋಪಗಳನ್ನು ಪುಷ್ಠೀಕರಿಸುವ ದಾಖಲೆಗಳಿಲ್ಲ ಎಂದು ಬಿ ರಿಪೋರ್ಟ್ ಸಲ್ಲಿಸಿದ್ದರು. ಪ್ರಕರಣದಿಂದ ಜಾರ್ಜ್ ಅವರು ಮುಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿ ಜಾರ್ಜ್ ಮರು ಸೇರ್ಪಡೆಯ ಬಗ್ಗೆ ಹೈಕಮಾಂಡ್ ಜತೆ ಚರ್ಚೆ ನಡೆಸಿ ಅಂಗೀಕಾರ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.

ಕಾವೇರಿ ವಿವಾದ ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗಿತ್ತು. ನಿನ್ನೆ ವಿಧಾನಸಭೆಯಲ್ಲಿ ಕಾವೇರಿ ನೀರನ್ನು ಕುಡಿಯುವ ನೀರಿಗೆ ಮಾತ್ರ ಸೀಮಿತಗೊಳಿಸುವುದಾಗಿ ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದರಿಂದ ಸದ್ಯಕ್ಕೆ ಕಾವೇರಿ ವಿವಾದ ತಾತ್ಕಾಲಿಕವಾಗಿ ತಣ್ಣಗಾದಂತಾಗಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಬೆಳಗ್ಗೆ 9.30ಕ್ಕೆ ಜಾರ್ಜ್ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಗಳಿವೆ. ಯಾವುದೇ ವಿವಾದಗಳು ಭುಗಿಲೇಳದಿದ್ದರೆ ಜಾರ್ಜ್ ಸೇರ್ಪಡೆ ಬಹುತೇಕ ಖಚಿತವಾಗಿದೆ. ಒಂದು ವೇಳೆ ಕಾವೇರಿ ವಿವಾದ ಮತ್ತೆ ರಾಡಿಯಾಗಿ ಜನ ಬೀದಿಗಿಳಿದರೆ ಸಂಪುಟ ವಿಸ್ತರಣೆಯನ್ನು ಮುಂದೂಡುವುದು ಸೂಕ್ತ ಎಂದು ಹಿರಿಯ ಸಚಿವರು ಸಲಹೆ ನೀಡಿದ್ದಾರೆ. ಈ ನಡುವೆ ಬಿಜೆಪಿ ಮತ್ತು ಡಿವೈಎಸ್‍ಪಿ ಗಣಪತಿ ಅವರ ಕುಟುಂಬ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖಾ ವರದಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಜಾರ್ಜ್ ಸೇರ್ಪಡೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ವಿವಾದವನ್ನು ಎದುರಿಸುವ ಸನ್ನಿವೇಶಗಳು ಸೃಷ್ಟಿಯಾಗಲಿವೆ.

► Follow us on –  Facebook / Twitter  / Google+

Facebook Comments

Sri Raghav

Admin